ಸರಕಾರಿ ಬಸ್ ಚಾಲನೆಗೆ ಒತ್ತಾಯಿಸಿ ಡಿವೈಎಫ್‌ಐ ಮನವಿ

ಮಂಗಳೂರು, ನ.25: ವಾಮಂಜೂರಿನ ಆಸುಪಾಸಿನ ಪ್ರದೇಶಗಳಲ್ಲಿ ಸರಕಾರಿ ಬಸ್ ಸಂಚಾರಕ್ಕೆ ಒತ್ತಾಯಿಸಿ ಡಿವೈಎಫ್‌ಐ ವಾಮಂಜೂರು ಪ್ರದೇಶ ಸಮಿತಿಯ ವತಿಯಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗೀಯ ಅಧಿಕಾರಿಗೆ ಮನವಿ ಸಲ್ಲಿಸಿತು.
ನೀರುಮಾರ್ಗ ಗ್ರಾಪಂ ವ್ಯಾಪ್ತಿಯ ಬೊಂಡಂತಿಲ ಪ್ರದೇಶಗಳಿಗೆ ಸಂಬಂಧಿಸಿದಂತೆ ವಾಮಂಜೂರು-ಕೆತ್ತಿಕಲ್ಲು-ತಾರಿಗುಡ್ಡೆ-ಕೋನಿಮಾರ್ ಮೂಲಕ ಬದ್ರಿಯಾನಗರ ಮಲ್ಲೂರನ್ನು ತಲುಪುವ ಪಿಡಬ್ಲಡಿ ಸ್ವಾಮ್ಯದ ರಸ್ತೆಯು ಹಾದು ಹೋಗುವ ಪ್ರದೇಶಗಳಲ್ಲಿ ಜನದಟ್ಟಣೆಯು ಹೆಚ್ಚಾಗಿದ್ದು ಬಸ್ ವ್ಯವಸ್ಥೆಯು ಇಲ್ಲವಾಗಿದೆ. ಇಲ್ಲಿನ ಜನತೆಗೆ ಸಂಚಾರವು ಕಷ್ಟಕರವಾಗಿದೆ. ಕೆತ್ತಿಕಲ್ಲು-ತಾರಿಗುಡ್ಡೆ-ಕೋನಿಮಾರ್ ಮೂಲಕವಾಗಿ ಮಲ್ಲೂರು ಬದ್ರಿಯಾ ನಗರವನ್ನು ತಲುಪುವ ಈ ರಸ್ತೆಯು ಹಾದುಹೋಗುವ ಪ್ರದೇಶಗಳಲ್ಲಿ ಸುಮಾರು 25,000ದಷ್ಟು ಜನಸಂಖ್ಯೆ ಇದ್ದು, ಹಲವಾರು ಶಾಲಾ ಕಾಲೇಜುಗಳನ್ನು ಒಳಗೊಂಡಂತೆ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶವಾಗಿದೆ. ಪ್ರಸ್ತುತ ಒಂದು ಬಸ್ಸು ಓಡಾಟದಲ್ಲಿದೆ. ಅದೂ ಸಮರ್ಪಕವಾಗಿಲ್ಲ. ಹಾಗಾಗಿ ಈ ಪ್ರದೇಶಕ್ಕೆ ಅನುಕೂಲವಾಗುವಂತೆ ಮಂಗಳೂರಿನಿಂದ ಪ್ರಾರಂಭಗೊಂಡು ಕೆತ್ತಿಕಲ್ಲು-ತಿರುವೈಲು-ತಾರಿಗುಡ್ಡೆ-ಮಲ್ಲೂರು ಮಾರ್ಗವಾಗಿ ಬಿ.ಸಿ.ರೋಡು ತಲುಪುವಂತೆ ಮತ್ತು ಬಿ.ಸಿ.ರೋಡಿನಿಂದ ಪ್ರಾರಂಭಗೊಂಡು ಮಲ್ಲೂರು-ತಾರಿಗುಡ್ಡೆ-ಕೆತ್ತಿಕಲ್ಲು-ಗುರುಪುರ ಕೈಕಂಬ ಮಾರ್ಗವಾಗಿ ಮೂಡುಬಿದ್ರಿ ತಲುಪುವಂತೆ ಸರಕಾರಿ ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕೆಂದು ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಡಿವೈಎಫ್‌ಐ ದ.ಕ. ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಕಾನ, ಸಂಘಟನೆಯ ಮುಖಂಡರಾದ ಮನೋಜ್ ವಾಮಂಜೂರು, ದಿನೇಶ್ ಬೊಂಡಂತಿಲ, ಹರೀಶ್ ಕೆ. ಅಮೀನ್ ದೇವಸಬೆಟ್ಟು, ಹೊನ್ನಯ ಅಂಚನ್ ಶಂಕೇಶಬೆಟ್ಟು ಉಪಸ್ಥಿತರಿದ್ದರು.