ಅಭಿವ್ಯಕ್ತಿ ಸ್ವಾತಂತ್ರದ ದಮನದ ಹಿಂದೆ ಬಂಡವಾಳಶಾಹಿಗಳು: ಕುಗ್ವೆ
‘ಅಭಿವ್ಯಕ್ತಿ ಸ್ವಾತಂತ್ರ’ ಕುರಿತು ವಿಚಾರ ಸಂಕಿರಣ

ಉಡುಪಿ, ನ.25: ಸರಕಾರಗಳು ಇಂದು ಬಂಡವಾಳಶಾಹಿ ಶಕ್ತಿಗಳ ಬೆಂಬಲ ದಿಂದ ಆಡಳಿತ ನಡೆಸುತ್ತಿದೆ. ಈ ಶಕ್ತಿಗಳಿಗೆ ಬೇಕಾಗಿರುವುದು ಲಾಭವೇ ಹೊರತು ಜನರ ಅಭಿವ್ಯಕ್ತಿ ಸ್ವಾತಂತ್ರ ಅಲ್ಲ. ಅದಕ್ಕಾಗಿ ಆ ಸ್ವಾತಂತ್ರವನ್ನು ದಮನ ಮಾಡುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಪ್ರಗತಿಪರ ಚಿಂತಕ ಹರ್ಷ ಕುಮಾರ್ ಕುಗ್ವೆ ಹೇಳಿದ್ದಾರೆ.
ಉಡುಪಿಯ ಕುರ್ಮ ಸಂಸ್ಥೆ ವತಿಯಿಂದ ರವಿವಾರ ಉಡುಪಿ ಕಿದಿಯೂರು ಹೊಟೇಲಿನ ಸಭಾಂಗಣದಲ್ಲಿ ಆಯೋಜಿಸಲಾದ ‘ಅಭಿವ್ಯಕ್ತಿ ಸ್ವಾತಂತ್ರ... ಎಲ್ಲಿ? ಯಾರಿಗೆ? ಎಷ್ಟು?’ ಎಂಬ ವಿಷಯದ ಕುರಿತ ವಿಚಾರ ಸಂಕಿರಣದಲ್ಲಿ ಅವರು ಅಭಿಪ್ರಾಯ ಮಂಡಿಸಿದರು.
ಈ ದೇಶ ಉಳಿಯಬೇಕಾದರೆ ಮುಖ್ಯವಾಗಿ ಸಂವಿಧಾನದ ಮೂಲಕ ಕಟ್ಟಿ ರುವ ಈ ಪ್ರಜಾಪ್ರಭುತ್ವವನ್ನು ಉಳಿಸಬೇಕು. ಅದಕ್ಕಾಗಿ ಆಡಳಿತ ಪಕ್ಷದಷ್ಟೆ ವಿರೋಧ ವಿಪಕ್ಷಗಳು ಕೂಡ ಪ್ರಬಲವಾಗಿರಬೇಕು. ಅಲ್ಲದೆ ಸ್ವ್ವತಂತ್ರ ಚಿಂತನೆ ಯ ಪ್ರಜೆಗಳು ಮತ್ತು ಸ್ವ್ವತಂತ್ರ ಮಾಧ್ಯಮಗಳು ಕೂಡ ಇರಬೇಕು ಎಂದರು.
ಅಭಿವ್ಯಕ್ತಿ ಸ್ವಾತಂತ್ರಕ್ಕೆ ಧಾರ್ಮಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಆಯಾಮಗಳಿವೆ. ದೇಶದ ಆಡಳಿತ ವರ್ಗ ಅಭಿವ್ಯಕ್ತಿ ಸ್ವಾತಂತ್ರ ವನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರವನ್ನು ಒಂದು ಕಡೆ ಆಡಳಿತ ವರ್ಗ ಇನ್ನೊಂದೆಡೆ ಸ್ವತಃ ಪ್ರಜೆಗಳೇ ಹರಣ ಮಾಡುತ್ತಿದ್ದಾರೆ. ಇಂದು ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕುವ ಪ್ರಯತ್ನ ಭಾರತ ಮಾತ್ರವಲ್ಲದೆ ಇಡೀ ಜಗತ್ತಿನಲ್ಲಿ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಇಂದು ಐಟಿ ಸೆಲ್‌ಗಳು ಸರಕಾರದ ಜನವಿರೋಧಿ ನೀತಿಗಳನ್ನು ಕೂಡ ಸಮರ್ಥನೆ ಮಾಡುವ ಮಟ್ಟಕ್ಕೆ ಬೆಳೆದು ನಿಂತಿದೆ. ಟೀಕೆ ಮಾಡಿದರೆ ದಾಳಿ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಈ ಮೂಲಕ ನಾವೇ ಅಭಿವ್ಯಕ್ತಿ ಸ್ವಾತಂತ್ರ ವನ್ನು ಹತ್ತಿಕ್ಕುತ್ತಿದ್ದೇವೆ. ಇದೊಂದು ರೀತಿಯ ಅಕ್ಷರ ಹಲ್ಲೆಯಾಗಿದೆ. ಇದು ಈಗ ನಮ್ಮ ಮುಂದೆ ಇರುವ ದೊಡ್ಡ ಸವಾಲು. ಇದನ್ನು ನಿಬಾಯಿಸದಿದ್ದರೆ ಪ್ರಜಾ ಪ್ರಭುತ್ವಕ್ಕೆ ಉಳಿಗಾಲ ಇಲ್ಲ. ವಿರೋಧಿ ಸಿದ್ಧಾಂತದವರು ಮೃತಪಟ್ಟಾಗ ಸಂಭ್ರಮಿಸುವ ದುಷ್ಟ ಪ್ರವೃತ್ತಿ ಕೂಡ ಬೆಳೆಯುತ್ತಿದೆಂದು ಅವರು ಟೀಕಿಸಿದರು.
ಪತ್ರಕರ್ತ ಸಂತೋಷ ತಮ್ಮಯ್ಯ ಮಾತನಾಡಿ, ಭಾಷಣದಲ್ಲಿ ನನ್ನ ವಿಚಾರ ಅಭಿವ್ಯಕ್ತ ಪಡಿಸಿದಕ್ಕೆ ನನ್ನನ್ನು ಬಂಧಿಸಲಾಯಿತು. ಆದುದರಿಂದ ಅಭಿವ್ಯಕ್ತಿ ಸ್ವಾತಂತ್ರದ ಹರಣಕ್ಕೆ ನಾನೇ ಜೀವಂತ ಸಾಕ್ಷಿ. ಇದರಿಂದ ಮಾನಸಿಕ ಹಿಂಸೆ ಅನುಭವಿಸಿದ್ದೇನೆ. ಆದರೆ ನಾನು ಅಂದಿನ ಹೇಳಿಕೆಗೆ ಈಗಲೂ ಬದ್ಧನಾಗಿ ದ್ದೇನೆ. ನನ್ನ ಲೇಖನಗಳಿಗೆ ಸರಪಣಿ ತೊಡಿಸಲಾಗಿದೆ. ಕೋರ್ಟ್ ಮತ್ತು ಹೊರಗಿನ ಮತಾಂಧರ ಕಾರಣಕ್ಕಾಗಿ ನನ್ನ ಕೆಲಸವನ್ನು ಹತ್ತಿಕ್ಕಿಕೊಳ್ಳಬೇಕಾಗಿದೆ. ಪತ್ರಕರ್ತ ನಾಗಿ ಇತಿಹಾಸವನ್ನು ಕೆದಕುವುದು ತಪ್ಪೆ ಎಂದು ಪ್ರಶ್ನಿಸಿದರು.
ಲೇಖಕ ಮತ್ತು ಉಪನ್ಯಾಸಕ ಡಾ.ಸಂತೋಷ್ ಕುಮಾರ್ ಶೆಟ್ಟಿ ಮಾತನಾಡಿ, ಪ್ರಭುತ್ವ ಮತ್ತು ಅದರ ಹಿಂಬಾಲಕರಿಗೆ ಅಭಿವ್ಯಕ್ತಿ ಸ್ವಾತಂತ್ರ ಇದ್ದರೆ, ಪ್ರಜೆ ಗಳಿಗೆ ಅವ್ಯಕ್ತ ಸ್ವಾತಂತ್ರ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ನ್ಯಾಯ ಕೂಡ ಒಂದು ಸಿದ್ಧಾಂತಕ್ಕೆ ಮಾತ್ರ ಸೀಮಿತವಾಗಿದೆ. ಅಭಿವ್ಯಕ್ತಿ ಸ್ವಾತಂತ್ರವು ಹೆಚ್ಚು ಬಳಕೆಯಾಗುತ್ತಿರುವುದು ದೇಶ ವಿರೋಧಿ ಚಟುವಟಿಕೆಗಳಿಗೆ ಎಂದು ಕಳವಳ ವ್ಯಕ್ತಪಡಿಸಿದರು.
ಸಂವಹನಕಾರರಾಗಿ ಮಣಿಪಾಲ ಸ್ಕೂಲ್ ಆಫ್ ಕಮ್ಯುನಿಕೇಶನ್‌ನ ಉಪನ್ಯಾಸಕ ರಾಜ್ ಗುಡಿ ಕಾರ್ಯಕ್ರಮ ನಡೆಸಿಕೊಟ್ಟರು. ಪತ್ರಕರ್ತ ವಸಂತ ಗಿಳಿಯಾರು ಪ್ರಾಸ್ತಾವಿಕವಾಗಿ ಮಾತನಾಡಿದು.
ಅಭಿವ್ಯಕ್ತಿ, ಇತಿಹಾಸದ ಹೇಳಿಕೆಗೆ ಪ್ರತಿವಾದ
ಸಂತೋಷ ತಮ್ಮಯ್ಯ ಭಾಷಣಕ್ಕೆ ಪ್ರತಿಕ್ರಿಯಿಸಿದ ಹರ್ಷ ಕುಮಾರ್ ಕುಗ್ವೆ, ಸಂವಿಧಾನದ ಪೀಠಿಕೆಯಡಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ ಎಂಬುದು ಇದ್ದರೆ ಸಂವಿ ಧಾನವೇ ನಮ್ಮನ್ನು ರಕ್ಷಿಸುತ್ತದೆ. ಸಂತೋಷ್ ತಮ್ಮಯ್ಯ ಹೇಳಿರುವ ಮಾತು ಸಂವಿಧಾನದ ಪೀಠಿಕೆಯ ಮೂಲಭೂತ ತತ್ವಕ್ಕೆ ಬದ್ಧವಾಗಿದ್ದರೆ ಅವರನ್ನು ಈ ಸಂವಿಧಾನವೇ ರಕ್ಷಿಸುತ್ತದೆ. ಒಂದೇ ವೇಳೆ ಅವರು ಅದಕ್ಕೆ ಬೆಲೆ ಕೊಡದೆ ಮಾತನಾಡಿದ್ದರೆ ಆ ಬಗ್ಗೆ ನ್ಯಾಯಾಲಯ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.
ಇತಿಹಾಸವನ್ನು ಕೆದಕುವುದು ತಪ್ಪಲ್ಲ. ಆದರೆ ಈ ಕಾಲದಲ್ಲಿ ನಮಗೆ ಇತಿ ಹಾಸ ಜೊತೆಗೆ ಹೇಗೆ ವ್ಯವಹರಿಸುವುದು ಎಂಬುದು ಗೊತ್ತಿಲ್ಲ. ಇತಿಹಾಸದಲ್ಲಿ ನಡೆದಿರುವ ಅನ್ಯಾಯವನ್ನು ಮುಂದೆ ಇಟ್ಟುಕೊಂಡು ಇಂದು ನಾವು ದ್ವೇಷ ಸಾಧಿಸುತ್ತಿದ್ದೇವೆ. ಆಗ ಆಗಿರುವ ಅನ್ಯಾಯಕ್ಕೆ ಈಗ ನ್ಯಾಯ ಕೇಳಲು ಹೋದರೆ ಶೈವರು, ಜೈನರು, ಮುಸ್ಲಿಮರು, ಕ್ರಿಶ್ಚಿಯನ್ನರು ಪರಸ್ಪರ ಹೊಡೆದಾಡಿಕೊಳ್ಳ ಬೇಕಾಗುತ್ತದೆ. ಈ ಮೂಲಕ ನಾವು ಇಡೀ ದೇಶವನ್ನು ಅಸಹಿಷ್ಣುತೆಯ ಕೂಪಕ್ಕೆ ತಳ್ಳುತ್ತಿದ್ದೇವೆ ಎಂದರು.