ಉತ್ತರ ಕರ್ನಾಟಕದ ಒಕ್ಕಲಿಗರಿಗೆ ಅನಾಥಪ್ರಜ್ಞೆ : ಸ್ಪಟಿಕಪುರಿ ಸ್ವಾಮೀಜಿ
ಅಖಿಲ ಕರ್ನಾಟಕ ಒಕ್ಕಲಿಗರ ಸಂಘಟನಾ ಸಮಾವೇಶ ಉದ್ಘಾಟನೆ

ಉಡುಪಿ, ನ.25: ದಕ್ಷಿಣ ಕರ್ನಾಟಕದಲ್ಲಿ ಒಕ್ಕಲಿಗ ಸಮಾಜ ಬಲಿಷ್ಠವಾಗಿದೆ. ಆದರೆ ಉತ್ತರ ಕರ್ನಾಟಕದಲ್ಲಿರುವ ಕುಡು ಒಕ್ಕಲಿಗರಿಗೆ ದೊಡ್ಡ ಸಮುದಾಯದ ಅಡಿಯಲ್ಲಿ ನೆಲೆ ಕಂಡುಕೊಳ್ಳುವ ಅನಿವಾರ್ಯತೆ ಎದುರಾಗಿದ್ದು, ಅವರಿಗೆ ಅನಾಥಪ್ರಜ್ಞೆ ಕಾಡುತ್ತಿದೆ. ಆದುದರಿಂದ ಆ ಸಮಾಜಕ್ಕೆ ಮಾನಸಿಕ ಸ್ಥೈರ್ಯ ನೀಡುವ ಕಾರ್ಯ ನಡೆಯಬೇಕು ಎಂದು ತುಮಕೂರು ಸ್ಪಟಿಕಪುರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಶ್ರೀನಂಜಾವಧೂತ ಮಹಾ ಸ್ವಾಮೀಜಿ ಹೇಳಿದ್ದಾರೆ.
ಉಡುಪಿ ಜಿಲ್ಲಾ ಒಕ್ಕಲಿಗರ ಸೇವಾ ಸಂಘದ ಆಶ್ರಯದಲ್ಲಿ ಅಜ್ಜರಕಾಡು ಪುರಭವನದಲ್ಲಿ ರವಿವಾರ ಆಯೋಜಿಸಲಾದ ಅಖಿಲ ಕರ್ನಾಟಕ ಒಕ್ಕಲಿಗರ ಸಂಘಟನಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಒಕ್ಕಲಿಗರು ಕಾಯಕ ಮತ್ತು ಭೂಮಿಯನ್ನು ನಂಬಿ ಬದುಕುತ್ತಿದ್ದಾರೆ. ಈ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು. ಒಕ್ಕಲಿಗ ಸಮಾಜದಲ್ಲಿ ಸಹಜವಾಗಿ ನಾಯಕತ್ವದ ಗುಣವಿದೆ. ಪ್ರಸ್ತುತ ಸಂಘಟನೆಯಲ್ಲಿ ಆ ಕೊರತೆ ಇರುವುದರಿಂದ ಸಮಾವೇಶದ ಮೂಲಕ ಒಗ್ಗೂಡಿಸುವ ಅನಿವಾರ್ಯತೆ ಎದುರಾಗಿದೆ ಎಂದರು.
ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಮಾತನಾಡಿ, ಬೈಂದೂರು ವಿಧಾನ ಸಭಾ ಕ್ಷೇತ್ರದಲ್ಲಿ ಹಿಂದುಳಿದ ಪ್ರದೇಶದಲ್ಲಿ 2,500 ಒಕ್ಕಲಿಗ ಮತದಾರರಿದ್ದು, ಈ ಭಾಗದಲ್ಲಿ ಆದಿಚುಂಚನಗಿರಿ ಕಾವೂರು ಶಾಖಾ ಮಠದಿಂದ ಪ್ರೌಢಶಾಲೆ ಪ್ರಾರಂಭಿಸುವುದಾದರೆ ಸರಕಾರದಿಂದ ಜಾಗ ದೊರಕಿಸಿ ಕೊಡುಲಾಗುವುದು ಎಂದು ಭರವಸೆ ನೀಡಿದರು.
ಉಡುಪಿ ಶಾಸಕ ರಘುಪತಿ ಭಟ್ ಮಾತನಾಡಿ, ರಾಜಕಾರಣಿಗಳಿಗೆ ಜಾತಿ ಎಂಬುದು ಇರಬಾರದು. ಎಲ್ಲಾ ಸಮಾಜದ ಸಮಸ್ಯೆಗಳಿಗೆ ಧ್ವನಿಯಾಗುವುದು ಜನಪ್ರತಿನಿಧಿಗಳ ಜವಾಬ್ದಾರಿಯಾಗಿದೆ. ಉಡುಪಿಯಲ್ಲಿ ಒಕ್ಕಲಿಗರ ಸಂಘಕ್ಕೆ ನಿವೇಶನ ಮಂಜೂರು ಮಾಡಲು ಪ್ರಯತ್ನಿಸಲಾಗುವುದು ಎಂದರು.
ಆದಿ ಚುಂಚನಗಿರಿ ಕಾವೂರು ಶಾಖಾ ಮಠದ ಶ್ರೀಧರ್ಮಪಾಲನಾಥ ಸ್ವಾಮೀಜಿ ಆಶೀರ್ವಚನ ನೀಡಿದರು.ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಸಿದ್ದರಾಜು ಗೌಡ ಅಧ್ಯಕ್ಷತೆ ವಹಿಸಿದ್ದರು.
ಬೆಂಗಳೂರು ನಗರ ಸಾಹಿತ್ಯ ಪರಿಷತ್ ಅಧ್ಯಕ್ಷ ಮಾಯಣ್ಣ, ರಾಜ್ಯ ಒಕ್ಕಲಿಗರ ಒಕ್ಕೂಟ ಟ್ರಸ್ಟ್ ಅಧ್ಯಕ್ಷ ಸಿ.ವಿ.ದೇವರಾಜು, ಹಾಸನ ಸಂಘದ ಜಿಲ್ಲಾಧ್ಯಕ್ಷ ಮುದ್ದೇಗೌಡ, ಮಂಡ್ಯ ಜಿಲ್ಲಾಧ್ಯಕ್ಷ ನಾಗಣ್ಣ ಬಾನಸವಾಡಿ, ಮಡಿಕೇರಿ ಜಿಲ್ಲಾಧ್ಯಕ್ಷ ಸೋಮಣ್ಣ ಸೂರ್ತಲೆ, ತುಮಕೂರು ಜಿಲ್ಲಾಧ್ಯಕ್ಷ ಕೆ.ಎಲ್.ಪ್ರಕಾಶ್, ಕೋಲಾರ ಜಿಲ್ಲಾಧ್ಯಕ್ಷ ಶಂಕರಪ್ಪ, ಕುಂದಾಪುರ ತಾಲೂಕು ಅಧ್ಯಕ್ಷ ಮಂಜುಗೌಡ, ಸುರೇಶ್ ಬಿ.ಎಂ., ಮಂಜುನಾಥ ಬಿ.ಸಿ. ಉಪಸ್ಥಿತರಿದ್ದರು.







