ಅಂಬರೀಶ್ ಅಂತಿಮ ದರ್ಶನ ಪಡೆದ ಜನಸಾಗರ

ಬೆಂಗಳೂರ, ನ.25: ಹಿರಿಯ ನಟ, ಮಾಜಿ ಸಚಿವ ಅಂಬರೀಶ್‌ರವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸಾರ್ವಜನಿಕರು, ಅಂಗಡಿ, ಮುಂಗಟ್ಟುಗಳು, ಚಿತ್ರಮಂದಿರಗಳು ಸೇರಿದಂತೆ ಜನತೆ ಸ್ವಯಂ ಪ್ರೇರಿತವಾಗಿ ಬಂದ್ ಆಚರಿಸಿ, ಕಂಬನಿ ಮಿಡಿದಿದ್ದಾರೆ.
ಬೆಂಗಳೂರು ನಗರದ ಬಹುತೇಕ ಚಿತ್ರಮಂದಿರಗಳು ಬಂದ್ ಆಗಿದ್ದವು. ಕೆಲವು ಕಡೆ ವಾಣಿಜ್ಯ ಸಂಕೀರ್ಣಗಳನ್ನು ಸ್ವಯಂ ಪ್ರೇರಿತವಾಗಿ ಮುಚ್ಚಿ,ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಬೆಂಗಳೂರು ನಗರದ ಬಹುತೇಕ ರಸ್ತೆಗಳು ವಾಹನ ಮುಕ್ತವಾಗಿದ್ದವು. ಸಾರ್ವಜನಿಕರು ನಗರದ ವಿವಿಧ ಭಾಗಗಳಿಂದ ನಡೆದುಕೊಂಡೆ ಬಂದು ಅಂತಿಮ ದರ್ಶನ ಪಡೆದರು.
ಅಂತಿಮ ದರ್ಶನಕ್ಕೆ ಹರಿದುಬಂದ ಜನಸಾಗರ: ನಗರದ ಕಂಠೀರವ ಸ್ಟೇಡಿಯಂನಲ್ಲಿ ಅಂಬರೀಶ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇಲ್ಲಿಗೆ ರಾಜ್ಯದ ವಿವಿಧ ಭಾಗಗಳಿಂದ ಜನಸಾಗರ ಹರಿದು ಬಂದಿತ್ತು. ನಗರದ ಕೆಂಪೇಗೌಡ ಬಸ್ ನಿಲ್ದಾಣ, ಶಾಂತಿನಗರ ಬಸ್ ನಿಲ್ದಾಣ ಹಾಗೂ ಕೆ.ಆರ್.ಮಾರ್ಕೆಟ್‌ನಿಂದ ಗುಂಪು-ಗುಂಪಾಗಿ ಜನತೆ ಕಂಠೀರವ ಸ್ಟೇಡಿಯಂನತ್ತ ಧಾವಿಸುತ್ತಿದದ್ದು ವಿಶೇಷವಾಗಿತ್ತು.
ದುಖಃ ಮಡುವಿನಲ್ಲಿ ಅಭಿಮಾನಿಗಳು: ನನ್ನ ನೆಚ್ಚಿನ ನಟ ಅಂಬರೀಷ್‌ರನ್ನು ಬದುಕಿದ್ದಾಗ ತೀರ ಹತ್ತಿರದಿಂದ ನೋಡಬೇಕೆಂದು ಆಸೆ ಪಟ್ಟಿದ್ದೆ. ಆದರೆ, ನನ್ನಂತಹ ಸಾಮಾನ್ಯ ವ್ಯಕ್ತಿಯಿಂದ ಅದು ಸಾಧ್ಯವಾಗಿಲ್ಲ. ಇವತ್ತು ಅವರು ನಿಧನರಾಗಿದ್ದಾರೆ. ಅವರ ಪಾರ್ಥಿವ ಶರೀರವನ್ನಾದರು ನೋಡಿ ಕಣ್ತುಂಬಿಸಿಕೊಳ್ಳೋಣವೆಂದು ಬಂದಿದ್ದೇನೆಂದು ಚಿಕ್ಕಬಳ್ಳಾಪುರದಿಂದ ಬಂದಿದ್ದ ಅಭಿಮಾನಿಯೊಬ್ಬರು ಕಣ್ಣೀರಿಟ್ಟರು.
ನಟ ಅಂಬರೀಶ್ ನನ್ನ ನೆಚ್ಚಿನ ಹೀರೊ. ಅವರ ಚಿತ್ರಗಳನ್ನು ನೋಡಿಕೊಂಡೆ ಬೆಳದವನು ನಾನು. ಅವರ ನಾಗರಹಾವು ಚಿತ್ರದಿಂದ ಪ್ರಾರಂಭಗೊಂಡು ‘ಅಂಬಿ ನಿನಗೆ ವಯಸ್ಸಾಯ್ತು’ ಎಂಬ ಸಿನೆಮಾದವರೆಗೆ ಎಲ್ಲವನ್ನು ನೋಡಿದ್ದೇನೆ. ಅವರು ಇನ್ನು ಸಾಕಷ್ಟು ವರ್ಷ ಬದುಕಿ, ಕನ್ನಡ ಸಿನೆಮಾ ರಂಗಕ್ಕೆ ಮಾರ್ಗದರ್ಶನ ನೀಡಬೇಕಿತ್ತು ಎಂದು ಗಾಂಧಿನಗರದ ರಮೇಶ್ ಕಂಬನಿ ಮಿಡಿದರು.
ಇಡೀ ದಿನ ಅಂಬರೀಷ್ ನೆನಪು: ಹಿರಿಯ ನಟ ಅಂಬರೀಷ್‌ರವರ ನಿಧನವು ಅವರು ಅಭಿಮಾನಿಗಳಲ್ಲಿ, ಜನತೆಯಲ್ಲಿ ದುಖಃ ಮಡುಗಟ್ಟುವಂತೆ ಮಾಡಿದೆ. ಸಾರ್ವಜನಿಕರು ಹೋಟೆಲ್‌ನಲ್ಲಿ, ಬಸ್‌ನಿಲ್ದಾಣಗಳಲ್ಲಿ ಅಂಬರೀಷ್ ಅವರ ಚಿತ್ರರಂಗದ, ರಾಜಕೀಯ ಜೀವನವನ್ನು ಮೆಲುಕು ಹಾಕುತ್ತಿದ್ದುದು ಸಾಮಾನ್ಯವಾಗಿತ್ತು.







