ಅಯೋಧ್ಯೆ ಪ್ರಕ್ಷುಬ್ಧತೆ : ರಾಷ್ಟ್ರಪತಿ, ಸರ್ವೋಚ್ಛ ನ್ಯಾಯಾಧೀಶರಿಗೆ ಪಾಪ್ಯುಲರ್ ಫ್ರಂಟ್ ಅಧ್ಯಕ್ಷರಿಂದ ಪತ್ರ

ಮಂಗಳೂರು, ನ. 25: ಅಯೋಧ್ಯೆ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ಆರೆಸ್ಸೆಸ್, ವಿಎಚ್ ಪಿ ಮತ್ತು ಇತರ ಹಿಂದುತ್ವ ಶಕ್ತಿಗಳು ಜಮಾವಣೆಗೊಂಡು ಮತೀಯ ಹಾಗೂ ಪ್ರಚೋದನಕಾರಿಯಾಗಿ ವರ್ತಿಸಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣಗೊಂಡಿರುವ ಹಿನ್ನೆಲೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅಧ್ಯಕ್ಷ ಇ. ಅಬೂಬಕ್ಕರ್ ಅವರು ರಾಷ್ಟ್ರಪತಿ ಮತ್ತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ತುರ್ತು ಪತ್ರವನ್ನು ಬರೆದು ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಹೊರಗಿನಿಂದ ಉದ್ರೇಕಿತ ಗುಂಪುಗಳನ್ನು ಅಯೋಧ್ಯೆ ಪ್ರದೇಶದಲ್ಲಿ ಜಮಾವಣೆಗೊಳಿಸಿ ಯುದ್ಧದಂತಹ ಸನ್ನಿವೇಶವು ನಿರ್ಮಾಣಗೊಂಡಿರುವ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟಗೊಂಡಿರುವ ವರದಿಯ ಕಡೆಗೆ ಗಮನ ಹರಿಸುವಂತೆ ಪತ್ರದ ಮೂಲಕ ಕೋರಿದ್ದಾರೆ. ಪ್ರಸಕ್ತ ಸನ್ನಿವೇಶವು ಸ್ಥಳೀಯ ಮುಸ್ಲಿಮರಲ್ಲಿ ಭೀತಿ ಮೂಡಿಸಿದ್ದು, ಆಭದ್ರತೆಯ ಬೆದರಿಕೆಯನ್ನು ಎದುರಿಸುತ್ತಿದ್ದಾರೆ. ಈಗಾಗಲೇ ಸಾವಿರಾರು ಮಂದಿ ನಗರವನ್ನು ತೊರೆದಿದ್ದಾರೆ. 1992ರ ಡಿಸೆಂಬರ್ ನಲ್ಲಿ ಬಾಬರಿ ಮಸ್ಜಿದ್ ಧ್ವಂಸಕ್ಕೆ ಮುನ್ನ ನಿರ್ಮಾಣವಾಗಿದ್ದ ಅದೇ ಪರಿಸ್ಥಿತಿಯು ಈಗ ಮರುಕಳಿಸಿದೆ ಎಂದು ಇ. ಅಬೂಬಕ್ಕರ್ ನೆನಪಿಸಿದ್ದಾರೆ.
ಈ ಎಲ್ಲ ವಿಧ್ವಂಸಕ ಕೃತ್ಯಗಳಿಗೆ ರಾಜಕೀಯ ಬೆಂಬಲವೂ ಇರುವುದರಿಂದ ಸದರಿ ಸನ್ನಿವೇಶದಲ್ಲಿ ಅಲ್ಪಸಂಖ್ಯಾತರ ರಕ್ಷಣೆ ಮತ್ತು ಬಾಬರಿ ಜಾಗದ ಕಾನೂನಾತ್ಮಕ ಭದ್ರತೆಯನ್ನು ರಾಷ್ಟ್ರಪತಿ ಮತ್ತು ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಪರಿಣಾಮಕಾರಿ ಮಧ್ಯಪ್ರವೇಶದಿಂದ ಮಾತ್ರ ಸಾಧಿಸಬಹುದು ಎಂದು ಇ. ಅಬೂಬಕ್ಕರ್ ಪತ್ರದ ಮೂಲಕ ತಿಳಿಸಿದ್ದಾರೆ.