ಜಾಫರ್ ಶರೀಫ್ ನಿಧನಕ್ಕೆ ರಾಹುಲ್ ಗಾಂಧಿ, ಪ್ರಣಬ್ ಮುಖರ್ಜಿ ಸೇರಿದಂತೆ ಗಣ್ಯರ ಸಂತಾಪ

ಬೆಂಗಳೂರು, ನ.25: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಶರೀಫ್(85) ನಿಧನಕ್ಕೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಇನ್ನಿತರ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
'ಜಾಫರ್ ಶರೀಫ್ ರವರು ದೀರ್ಘ ಕಾಲದವರೆಗೆ ನನ್ನ ಸಹೋದ್ಯೋಗಿಯಾಗಿದ್ದರು. ಕೇಂದ್ರ ಸಚಿವರಾಗಿದ್ದ ಸಂದರ್ಭದಲ್ಲಿ ಅವರು, ಎಲ್ಲಾ ವರ್ಗವನ್ನು ಒಂದೇ ರೀತಿ ನೋಡಿ, ಭಾರತ ಅಭಿವೃದ್ಧಿ ಹೊಂದುವ ಕನಸನ್ನು ಕಂಡಿದ್ದರು. ಉತ್ತಮ ರಾಜಕಾರಣಿಯಾಗಿದ್ದರು. ಒಳ್ಳೆಯ ಆದರ್ಶಗಳನ್ನು ಅಳವಡಿಸಿಕೊಂಡಿದ್ದ ನಾಯಕನನ್ನು ರಾಷ್ಟ್ರ ಕಳೆದುಕೊಂಡಿದೆ. ಅವರ ಅಗಲಿಕೆ ನೋವನ್ನು ತಡೆದುಕೊಳ್ಳುವ ಶಕ್ತಿ ದೇವರು ಅವರ ಕುಟುಂಬಕ್ಕೆ, ಬಳಗಕ್ಕೆ ನೀಡಲಿ' ಎಂದು ಪ್ರಣಬ್ ಮುಖರ್ಜಿ ಸಂತಾಪ ಸೂಚಿಸಿದ್ದಾರೆ.
ರಾಹುಲ್ ಗಾಂಧಿ: ಕರ್ನಾಟಕದ ನಮ್ಮ ಕುಟುಂಬದ ಇನ್ನೊಬ್ಬ ಹಿರಿಯ ನಾಯಕ, ಪ್ರೀತಿ ಪಾತ್ರ ಮತ್ತು ಗೌರವಾನ್ವಿತ ವ್ಯಕ್ತಿಯಾದ ಜಾಫರ್ ಶರೀಫ್ ಅವರನ್ನು ಕಳೆದುಕೊಂಡು ಕಾಂಗ್ರೆಸ್ ಪಕ್ಷಕ್ಕೆ ಅತ್ಯಂತ ದುಃಖವಾಗಿದೆ. ದೇವರು ಅವರ ಕುಟುಂಬಕ್ಕೆ ಮತ್ತು ಬೆಂಬಲಿಗರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಕಂಬನಿ ಮಿಡಿದಿದ್ದಾರೆ.
ಮಮತಾ ಬ್ಯಾನರ್ಜಿ: ಸಿ.ಕೆ.ಜಾಫರ್ ಶರೀಫ್ ನಿಧನದ ಸುದ್ದಿ ಕೇಳಿ ದುಃಖಿತನಾಗಿದ್ದೇನೆ. ಅವರು ನನ್ನ ಮೇಲೆ ವಿಶೇಷವಾದ ಪ್ರೀತಿಯನ್ನು ಹೊಂದಿದ್ದರು. ಸಂಸದನಾಗಿ ನನ್ನ ಮೊದಲ ಅವಧಿಗೆ ಅವರನ್ನು ಭೇಟಿ ಮಾಡಿದ್ದೆ. ಅವರ ಕುಟುಂಬಕ್ಕೆ ಮತ್ತು ಅವರ ಅನೇಕ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ಆ ದೇವರು ನೀಡಲಿ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವಿಟ್ ಮಾಡಿ ಸಂತಾಪ ಸೂಚಿಸಿದ್ದಾರೆ.
ಮೆಹಬೂಬಾ ಮುಫ್ತಿ: ಜಾಫರ್ ಶರೀಫ್ ಹಠಾತ್ ನಿಧನದಿಂದ ತುಂಬಾ ದುಃಖವಾಗಿದೆ. ಒಬ್ಬ ಉನ್ನತ ಮುಖಂಡ ಹಾಗೂ ಮಹಾನ್ ವ್ಯಕ್ತಿಯನ್ನು ಕಳೆದುಕೊಂಡಂತಾಗಿದೆ. ನಮ್ಮ ಕುಟುಂಬವು ಪ್ರೀತಿಯ ಆತ್ಮೀಯರೊಬ್ಬರನ್ನು ಕಳೆದುಕೊಂಡಿದೆ. ಜಾಫರ್ ಶರೀಫ್ ಕುಟುಂಬಕ್ಕೆ ದೇವರು ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪಿಡಿಪಿ ಮುಖ್ಯಸ್ಥೆ ಹಾಗೂ ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಕಂಬನಿ ಮಿಡಿದಿದ್ದಾರೆ.
ಎಸ್.ಎಂ.ಕೃಷ್ಣ: ಜಾಫರ್ ಶರೀಫ್ ನನ್ನ ಜೊತೆ ದೀರ್ಘಕಾಲದ ಒಡನಾಟ ಹೊಂದಿದ್ದರು. ಕಾಂಗ್ರೆಸ್ ಪಕ್ಷಕ್ಕಾಗಿ ಹಾಗೂ ದೇಶಕ್ಕಾಗಿ ದುಡಿದಿದ್ದರು. ಅಂತಹ ನಾಯಕ ಇಂದು ನಮ್ಮೊಂದಿಗಿಲ್ಲ. ಇದು ನಿಜಕ್ಕೂ ನೋವು ತರುವ ವಿಷಯ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಪ್ರಾರ್ಥಿಸಿದ್ದಾರೆ.
ದ್ವಾರಕೀಶ್: ಜಾಫರ್ ಶರೀಫ್ ನನ್ನ ಕಷ್ಟ ಕಾಲದಲ್ಲಿ ಜೊತೆಯಲ್ಲಿದ್ದರು. ನನ್ನ ಹೃದಯ ಶಸ್ತ್ರಚಿಕಿತ್ಸೆಗೆ ಹಣಕಾಸು ನೆರವು ನೀಡಿದ್ದರು. ಅವರ ನಿಧನದಿಂದ ನನಗೆ ತೀವ್ರ ನೋವಾಗಿದೆ. ನಾನು ನನ್ನ ಗಾಡ್ ಫಾದರ್ ನನ್ನು ಕಳೆದುಕೊಂಡಿದ್ದೇನೆ. ನಾನು ನನ್ನ ಆತ್ಮೀಯ ಸ್ನೇಹಿತ ಅಂಬರೀಶ್‌ನನ್ನೂ ಕಳೆದುಕೊಂಡಿದ್ದೇನೆ ಎಂದು ಹಿರಿಯ ನಟ, ನಿರ್ದೇಶಕ ದ್ವಾರಕೀಶ್ ತಿಳಿಸಿದ್ದಾರೆ.
ರಹ್ಮಾನ್ ಖಾನ್: ಸಿ.ಕೆ.ಜಾಫರ್ ಶರೀಫ್ ನಿಧನದಿಂದ ನಾವು ಒಬ್ಬ ಪ್ರಮುಖ ನಾಯಕನನ್ನು ಕಳೆದುಕೊಂಡಂತಾಗಿದೆ. ಅವರು ನನ್ನ ರಾಜಕೀಯ ಮಾರ್ಗದರ್ಶಕ ಹಾಗೂ ದೀರ್ಘಕಾಲದ ಗೆಳೆಯರಾಗಿದ್ದರು. ದೇಶ ಹಾಗೂ ರಾಜ್ಯದ ಜನತೆಗೆ ತಮ್ಮದೆ ರೀತಿಯಲ್ಲಿ ಅವರು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಭಾರತೀಯ ರೈಲ್ವೆ ಇಲಾಖೆಗೆ ಅವರು ಸಲ್ಲಿಸಿರುವ ಸೇವೆ ಅವಿಸ್ಮರಣೀಯ ಎಂದು ಮಾಜಿ ಕೇಂದ್ರ ಸಚಿವ ಡಾ.ಕೆ.ರಹ್ಮಾನ್ ಖಾನ್ ಕಂಬನಿ ಮಿಡಿದಿದ್ದಾರೆ.
ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಶರೀಫ್ ಇನ್ನಿಲ್ಲವಾದುದು ಅತ್ಯಂತ ವಿಷಾದನೀಯ. ಸಂಸದರಾಗಿ, ಕೇಂದ್ರದ ಸಚಿವರಾಗಿ ಅವರು ಸಲ್ಲಿಸಿದ ಸೇವೆ ಸ್ಮರಣೀಯ. ವಿಶೇಷವಾಗಿ ರೈಲ್ವೆ ಸಚಿವರಾಗಿದ್ದ ಅವಧಿಯಲ್ಲಿ ರಾಜ್ಯಕ್ಕೆ ಹಾಗೂ ದೇಶಕ್ಕೆ ಅವರು ನೀಡಿದ ಕೊಡುಗೆ ಅಪಾರ. ಶ್ರೀಯುತದ ನಿಧನದಿಂದ ಇಡೀ ನಾಡಿಗೆ ಭರಿಸಲಾರದ ನಷ್ಟವುಂಟಾಗಿದೆ. ಭಗವಂತನು ಇವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲೆಂದು, ದುಃಖತಪ್ತರಾಗಿರುವ ಅವರ ಕುಟುಂಬ ವರ್ಗ ಹಾಗೂ ಅಭಿಮಾನಿ ವೃಂದಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲೆಂದು ಆಶಿಸುತ್ತೇನೆ.
-ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಪೀಠಾಧ್ಯಕ್ಷರು, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನಮಠ







