ಮಂಡ್ಯದ ಕ್ರೀಡಾಂಗಣದಲ್ಲಿ ಅಂಬರೀಶ್ ಅಂತಿಮ ದರ್ಶನ: ಗಣ್ಯರು ಸೇರಿದಂತೆ ಸಹಸ್ರಾರು ಮಂದಿ ಭಾಗಿ

ಮಂಡ್ಯ, ನ.25: ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿರುವ ಪಾರ್ಥೀವ ಶರೀರಕ್ಕೆ ಜಿಲ್ಲೆಯ ಸಾವಿರಾರು ಮಂದಿ ಅಂತಿಮ ಸಲ್ಲಿಸಿದರು.
ರವಿವಾರ ಸಂಜೆ 5 ಗಂಟೆಗೆ ರಕ್ಷಣಾ ಇಲಾಖೆ ವಿಶೇಷ ಹೆಲಿಕಾಫ್ಟರ್ ನಲ್ಲಿ ಅಂಬರೀಶ್ ಅವರ ಪಾರ್ಥೀವ ಶರೀರವನ್ನು ಕ್ರೀಡಾಂಗಣಕ್ಕೆ ತರುತ್ತಿದ್ದಂತೆ ನೆರೆದಿದ್ದ ಅಭಿಮಾನಿಗಳು ಘೋಷಣೆ ಕೂಗಿದರು. ಕೆಲವು ಅಭಿಮಾನಿಗಳು ದುಃಖವನ್ನು ತಡೆಯಲಾರದೆ ಬಾಯಿ ಬಾಯಿ ಬಡಿದುಕೊಂಡು ರೋಧಿಸಿದರು. ಅಭಿಮಾನಿಗಳು ಯಾವುದೇ ಭಾವೋದ್ಗೇಕಕ್ಕೆ ಒಳಗಾಗಬಾರದು ಎಂದು ಸಂಸದ ಸಿ.ಎಸ್.ಪುಟ್ಟರಾಜು ಮನವಿ ಮಾಡಿದರು.
ಪಾರ್ಥೀವ ಶರೀರದ ಜತೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಅಂಬರೀಶ್ ಪತ್ನಿ ಸುಮಲತ, ಪುತ್ರ ಅಭಿಷೇಕ್ ಗೌಡ, ಚಿತ್ರ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ನಟರಾದ ನಿಖಿಲ್ ಕುಮಾರಸ್ವಾಮಿ, ಯಶ್, ಚಲನಚಿತ್ರ ನಿರ್ದೇಶಕ ಪ್ರೇಮ್ ಆಗಮಿಸಿದರು. ಹೆಲಿಕಾಫ್ಟರ್ ನಿಂದ ಪೆಟ್ಟಿಗೆಯಲ್ಲಿ ಪಾರ್ಥೀವ ಶರೀರವನ್ನು ಇಳಿಸುತ್ತಿದ್ದಂತೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು, ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಜಿಲ್ಲಾಡಳಿತದ ಪರವಾಗಿ ನಮನ ಸಲ್ಲಿಸಿ ಬರಮಾಡಿಕೊಂಡರು.
ನಂತರ ಸಿಂಗಾರಗೊಂಡಿದ್ದ ವೇದಿಕೆಗೆ ತಂದು ಸಾರ್ವಜನಿಕರಿಗೆ ಸರತಿ ಸಾಲಿನಲ್ಲಿ ದರ್ಶನ ಪಡೆಯಲು ಅವಕಾಶ ನೀಡಲಾಯಿತು. ಬೆಳಗ್ಗೆಯಿಂದಲೇ ಕ್ರೀಡಾಂಗಣದಲ್ಲಿ ಕಾದು ಕುಳಿತಿದ್ದ ಸಹಸ್ರಾರು ಅಭಿಮಾನಿಗಳು ಸರತಿಯಲ್ಲಿ ಸಾಗಿ ತಮ್ಮ ನೆಚ್ಚಿನ ನಾಯಕನಿಗೆ ಅಂತಿಮ ನಮನ ಸಲ್ಲಿಸಿ ಭಾವಪೂರ್ಣ ವಿದಾಯ ಹೇಳಿದರು. ಅಂಬರೀಶ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆಯಲು ಜಿಲ್ಲೆಯ ಮೂಲೆ ಮೂಲೆಯಿಂದ ಅಭಿಮಾನಿಗಳು ಆಗಮಿಸುತ್ತಿದ್ದು, ಪೊಲೀಸರು ಬಿಬಿಭದ್ರತೆಯಲ್ಲಿ ದರ್ಶನಕ್ಕೆ ಅವಕಾಶ ಮಾಡಿಕೊಡುತ್ತಿದ್ದಾರೆ.
ಇದಕ್ಕೂ ಮುನ್ನ ಕ್ರೀಡಾಂಗಣಕ್ಕೆ ಆಗಮಿಸಿದ ದಕ್ಷಿಣ ವಲಯ ಡಿಐಜಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾಧಿಕಾರಿ ಎನ್.ಮಂಜುಶ್ರೀ ನೇತೃತ್ವದಲ್ಲಿ ಸೂಕ್ತ ಬಿಗಿಭದ್ರತೆ ವ್ಯವಸ್ಥೆ ಪರಿಶೀಲನೆ ನಡೆಯಿತು. ಪಾರ್ಥೀವ ಶರೀರ ತರುವ ಮುನ್ನ ಮಧ್ಯಾಹ್ನ ಹೆಲಿಕಾಫ್ಟರ್ ಬಂದ ಪೈಲಟ್ ವೈಮಾನಿಕ ಸಮೀಕ್ಷೆ ಹಾಗೂ ಲ್ಯಾಂಡಿಂಗ್ ತಪಾಸಣೆ ನಡೆಸಿ, ಬೆಂಗಳೂರಿಗೆ ತೆರಳಿ ಪಾರ್ಥೀವ ಶರೀರವನ್ನು ತರಲಾಯಿತು.
ಸರ್.ಎಂ.ವಿ. ಕ್ರೀಡಾಂಗಣದಲ್ಲಿ ರವಿವಾರ ಸಂಜೆ 6ರಿಂದ ಸೋಮವಾರ ಬೆಳಗ್ಗೆ 6ರವರೆಗೆ ಅಂಬರೀಶ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಕ್ರೀಡಾಂಗಣದಲ್ಲಿ ಪೊಲೀಸ್ ಸರ್ಪಗಾವಲು ಇರಿಸಲಾಗಿದೆ. ಸುಮಾರು 500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆಯಾಗಿದ್ದು, ಐದು ಜಿಲ್ಲೆಗಳ ಎಸ್‍ಪಿ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಕ್ರೀಡಾಂಗಣದತ್ತ ಧಾವಿಸುತ್ತಿರುವ ಅಂಬರೀಶ್ ಅಭಿಮಾನಿಗಳು, ಸಾರ್ವಜನಿಕರಿಗೆ ಮತ್ತು ಗಣ್ಯರಿಗೆ ಅಂತಿಮ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
ಈ ನಡುವೆ ಹಲವು ಅಭಿಮಾನಿ ಕಲಾವಿದರು ನೆಚ್ಚಿನ ನಾಯಕ ಅಂಬರೀಶ್ ಅವರ ಮೇಲೆ ಹಾಡುಗಳನ್ನು ಕಟ್ಟಿ ಪಾರ್ಥೀವ ಶರೀರದ ಮುಂದೆ ಹಾಡುತ್ತಾ ಅಗಲಿದ ನಾಯಕನಿಗೆ ವಿದಾಯ ಹೇಳುತ್ತಿದ್ದಾರೆ.







