ರಾಮಮಂದಿರ ನಿರ್ಮಾಣವಾಗುವವರೆಗೆ ನಮಗೆ ಅಚ್ಛೇ ದಿನ್ ಇಲ್ಲ : ಸೋಹನ್ ಸಿಂಗ್ ಸೋಲಂಕಿ
ನೆಹರೂ ಮೈದಾನದಲ್ಲಿ ವಿಹಿಂಪ ವತಿಯಿಂದ ಜನಾಗ್ರಹ ಸಭೆ

ಮಂಗಳೂರು, ನ. 25: ರಾಮಮಂದಿರ ನಿರ್ಮಾಣವಾಗುವವರೆಗೆ ನಮಗೆ ಅಚ್ಛೇ ದಿನ ಆಗಲು ಸಾಧ್ಯವಿಲ್ಲ, ದೇಶದಲ್ಲಿರುವ ಬಾಬರ್ ಮನಸ್ಥಿತಿಯ ಜನರಿಂದಾಗಿ ರಾಮಮಂದಿರ ನಿರ್ಮಾಣ ಸಾಧ್ಯವಾಗಿಲ್ಲ. ಸುಪ್ರೀಂಕೋರ್ಟ್ ಕೂಡಾ ಕೋಟ್ಯಂತರ ಹಿಂದೂಗಳ ಭಾವನೆಗೆ ಗೌರವ ನೀಡಿಲ್ಲ ಎಂದು ವಿಶ್ವ ಹಿಂದೂ ಪರಿಷತ್ ಹಿರಿಯ ಮುಖಂಡ ಸೋಹನ್ ಸಿಂಗ್ ಸೋಲಂಕಿ ಹೇಳಿದರು.
ನಗರದ ನೆಹರೂ ಮೈದಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವಿಶ್ವ ಹಿಂದೂ ಪರಿಷತ್ ವತಿಯಿಂದ ಹಮ್ಮಿಕೊಂಡ ಜನಾಗ್ರಹ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಕೇಂದ್ರದಲ್ಲಿ ನಮ್ಮ ಸರಕಾರ ಇದೆ ಆದರೂ ರಾಮಂದಿರ ನಿರ್ಮಾಣವಾಗಿಲ್ಲ. ಕರ್ನಾಟಕದ ವಿನಾಶಕ್ಕೆ ಕಾರಣವಾದ ಟಿಪ್ಪು ಜಯಂತಿಯನ್ನು ಆಚರಿಸಲಾಗುತ್ತದೆ. ಇಲ್ಲಿನ ಸ್ವಾಭಿಮಾನಿಗಳು ಕೃಷ್ಣ ದೇವರಾಯ ಜಯಂತಿಯನ್ನು ಆಚರಿಸಬೇಕೇ ಹೊರತು ಟಿಪ್ಪು ಜಯಂತಿಯನ್ನಲ್ಲ. ಬಾಬರ್, ಅಕ್ಬರ್ ಇ ದೇಶದ ದೌರ್ಭಾಗ್ಯ, ಛತ್ರಪತಿ ಶಿವಾಜಿ ಮಹಾರಾಜ, ರಾಣಾ ಪ್ರತಾಪ ಸಿಂಹ ಈ ದೇಶದ ಸ್ವಾಭಿಮಾನದ ಪ್ರತೀಕ ಎಂದರು.
ಬಾಬರಿ ಮಸೀದಿಯ ಹೆಸರಿನಲ್ಲಿ ಆಡಳಿತ ನಡೆಸುವವರು ಅಧಿಕಾರ ಕಳೆದುಕೊಂಡಿದ್ದಾರೆ. ನ್ಯಾಯಾಲಯ ಮಂದಿರ ನಿರ್ಮಾಣಕ್ಕೆ ಅವಕಾಶ ನೀಡದಿರುವುದ ರಿಂದ ಕೇಂದ್ರ ಸರಕಾರ ಮಂದಿರ ನಿರ್ಮಿಸಲು ಅವಕಾಶ ಮಾಡಿಕೊಡಬೇಕಾಗಿದೆ. ರಾಮಮಂದಿರ ನಿರ್ಮಿಸಲು ಈ ಹಿಂದೆ ಅಶೋಕ್ ಸಿಂಘಾಲ್ ನೇತೃತ್ವದಲ್ಲಿ ಹೋರಾಟ ನಡೆದಂತೆ ಈ ಬಾರಿ ಪೇಜಾವರ ಶ್ರೀ ನೇತೃತ್ವದಲ್ಲಿ ಹೋರಾಟ ನಡೆಸಲಿದೆ ಎಂದು ಸೋಹನ್ ಸಿಂಗ್ ಸೋಲಂಕಿ ತಿಳಿಸಿದ್ದಾರೆ.
ರಾಮಮಂದಿರ ನಿರ್ಮಾಣಕ್ಕೆ ಶಾಸನ ರೂಪಿಸಲು ಸಂಸದರಿಗೆ ಮನವಿ
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಿಸಲು ವಿಶ್ವ ಹಿಂದೂ ಪರಿಷತ್ ಸಭೆಯಲ್ಲಿಂದು ಸಂಸದ ನಳಿನ್ ಕುಮಾರ್ ಕಟೀಲ್‌ಗೆ ಮನವಿ ಸಲ್ಲಿಸಲಾಯಿತು. ವೇದಿಕೆಗೆ ಬಂದು ಮನವಿ ಸ್ವೀಕರಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡುತ್ತಾ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲೇ ಬೇಕು. ಶ್ರೀರಾಮಮಂದಿರ ನಿರ್ಮಾಣದ ಹೊಣೆಗಾರಿಕೆಯೊಂದಿಗೆ ಸಂಸದನಾಗಿ ಆಯ್ಕೆಯಾಗಿದ್ದೇನೆ ಎನ್ನುವುದನ್ನು ಮರೆತಿಲ್ಲ. ಚಳಿಗಾಲದ ಅಧಿವೇಶನದಲ್ಲಿ ಸಂಸತ್ತಿನಲ್ಲಿ ಈ ವಿಷಯ ಪ್ರಸ್ತಾಪಿಸುತ್ತೇನೆ ಎಂದು ಭರವಸೆ ನೀಡಿದರು.
ವೇದಿಕೆಯಲ್ಲಿ ಒಡಿಯೂರು ಶ್ರೀ ಗುರು ದೇವಾನಂದ, ವಜ್ರದೇಹಿ ರಾಜಶೇಖರಾನಂದಶ್ರೀ, ಕಣಿಯೂರು ಮಾಹಬಲ ಶ್ರೀ, ಕರಿಂಜೆ ಕ್ಷೆತ್ರದ ಮುಕ್ತಾನಂದ ವಿದ್ಯಾನಂದಶ್ರೀ, ವಿಶ್ವ ಹಿಂದೂ ಪರಿಷತ್ ಕರ್ನಾಟಕ ದಕ್ಷಿಣ ವಿಭಾಗದ ಅಧ್ಯಕ್ಷ ಪೊ. ಎಂ.ಬಿ.ಪುರಾಣಿಕ್, ವಿಭಾಗ ಮುಖ್ಯಸ್ಥ ನಾ. ಸೀತಾರಾಮ, ಸಹಕಾರ್ಯದರ್ಶಿ ಕೃಷ್ಣ ಮೂರ್ತಿ, ಬಜರಂಗದಳದ ಪ್ರಾಂತ ಸಹ ಸಂಯೋಜಕ ಮುರಳೀ ಕೃಷ್ಣ ಹಂಸತಡ್ಕ, ವಿಶ್ವ ಹಿಂದೂ ಪರಿಷತ್ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ಮಂಗಳೂರು ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಜಗದೀಶ್ ಶೇಣವ, ಕಾರ್ಯಾಧ್ಯಕ್ಷ ಗೋಪಾಲ್ ಕುತ್ತಾರ್, ಕೃಷ್ಣ ಪ್ರಸನ್ನ ಪುತ್ತೂರು, ದುರ್ಗಾವಾಹಿನಿ ಸಂಯೋಜಕಿ ವಿದ್ಯಾ ಮಲ್ಯ ಮೊದಲಾದವರು ಉಪಸ್ಥಿತರಿದ್ದರು.