‘ಯಕ್ಷಗಾನ ಕಲಾರಂಗ’- ‘ಶ್ರೀವಿಶ್ವೇಶ ತೀರ್ಥ’ ಪ್ರಶಸ್ತಿ ಪ್ರದಾನ

ಉಡುಪಿ, ನ.20: ಉಡುಪಿ ಯಕ್ಷಗಾನ ಕಲಾರಂಗದ ವತಿಯಿಂದ 17 ಕಲಾವಿದರಿಗೆ ‘ಯಕ್ಷಗಾನ ಕಲಾರಂಗ’ ಹಾಗೂ ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳಕ್ಕೆ ‘ಶ್ರೀವಿಶ್ವೇಶ ತೀರ್ಥ ಪ್ರಶಸ್ತಿ ಪ್ರದಾನ ಸಮಾರಂಭವು ರವಿವಾರ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜರಗಿತು.
‘ಶ್ರೀವಿಶ್ವೇಶ ತೀರ್ಥ ಪ್ರಶಸ್ತಿಯನ್ನು ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ ಅಧ್ಯಕ್ಷ ಹರಿನಾರಾಯಣದಾಸ ಅಸ್ರಣ್ಣ ಸ್ವೀಕರಿಸಿದರು. ಯಕ್ಷಗಾನ ಕಲಾರಂಗ ಪ್ರಶಸ್ತಿಯನ್ನು ಪಟ್ಲಗುತ್ತು ಮಹಾಬಲ ಶೆಟ್ಟಿ, ಜಯಂತ ನಾಯ್ಕ, ಸುಬ್ರಾಯ ಪಾಟಾಳಿ, ರಾಜರತ್ನಂ ದೇವಾಡಿಗ, ಸೀತಾರಾಮ ಹೆಗಡೆ ಉಳವಿ, ಉಬರಡ್ಕ ಉಮೇಶ್ ಶೆಟ್ಟಿ, ಎಚ್. ಶ್ರೀಧರ ಹಂದೆ, ನರಾಡಿ ಬೋಜರಾಜ ಶೆಟ್ಟಿ, ಪುತ್ತಿಗೆ ರಘುರಾಮ ಹೊಳ್ಳ, ಕೊಕ್ಕುಡ್ತಿ ಕೃಷ್ಣಮೂರ್ತಿ, ಭಾಸ್ಕರ ಜೋಶಿ ಶಿರಳಗಿ, ಬಾಳೆಹದ್ದ ಕೃಷ್ಣ ಭಾಗವತ, ಬಂಟ್ವಾಳ ಜಯರಾಮ ಆಚಾರ್ಯ, ಡಿ. ಸಂತೋಷ್ ಕುಮಾರ್, ಹಳುವಳ್ಳಿ ಗಣೇಶ್ ಭಟ್, ರಾಮ ದೇವಾಡಿಗ ಕೊಚ್ಚಾಡಿ ಹಾಗೂ ಯಕ್ಷಚೇತನ ಪ್ರಶಸ್ತಿಯನ್ನು ಪ್ರೊ.ನಾರಾಯಣ ಎಂ.ಹೆಗಡೆ ಅವರಿಗೆ ಪ್ರದಾನ ಮಾಡಲಾಯಿತು.
ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಹಾಗೂ ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಿದರು. ಬಳಿಕ ಮಾತನಾಡಿದ ಪೇಜಾವರ ಶ್ರೀ, ಯಕ್ಷಗಾನ ಕಲೆ ಇಳಿಮುಖವಾಗುತ್ತಿದೆ ಎಂಬ ವಾದವನ್ನು ನಾನು ಒಪ್ಪುದಿಲ್ಲ. ಆ ಕಲೆ ಈಗ ಮೊದಲಿಗಿಂತಲೂ ಬೆಳೆಯುತ್ತಿದೆ ಎಂದು ಅಭಿಪ್ರಾಯ ಪಟ್ಟರು.
ಕಲಾಂತರಂಗ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಹಿರಿಯ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಮಾತನಾಡಿ, ಅದಮಾರು ಮಠದ ಮೂಲ ಯತಿ ಶ್ರೀನರಹರಿತೀರ್ಥರಿಂದ ಯಕ್ಷಗಾನ ಬೆಳೆದು ಬಂತು. ಕೂಚಿಪುಡಿಗೂ ಯಕ್ಷಗಾನವೇ ಮೂಲ. ಯಕ್ಷಗಾನದಲ್ಲಿರುವ ಕ್ರಿಯಾಶೀಲತೆ ಜಗತ್ತಿನ ಬೇರೆ ಯಾವುದೇ ಕಲೆಗಳಲಿಲ್ಲ. ಯಕ್ಷಗಾನದಲ್ಲಿರುವ ಕುಣಿತ, ತಾಳ-ಮೇಳ ಎಲ್ಲವೂ ಸ್ವಂತಿಕೆಯಿಂದ ಕೂಡಿದೆ ಎಂದರು.
ಮುಖ್ಯ ಅತಿಥಿಗಳಾಗಿ ಕರ್ಣಾಟಕ ಬ್ಯಾಂಕಿನ ಮಹಾಪ್ರಬಂಧಕ ಮಹಾ ಲಿಂಗೇಶ್ವರ ಕೆ., ಲೆಕ್ಕಪರಿಶೋಧಕ ಗಣೇಶ್ ಬಿ.ಕಾಂಚನ್ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಗಣೇಶ್ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು. ನಂತರ ಕಟೀಲು ಶ್ರೀದುರ್ಗಾ ಮಕ್ಕಳ ಮೇಳದಿಂದ ‘ಕುಶ-ಲ’ ಯಕ್ಷಗಾನ ಪ್ರದರ್ಶನಗೊಂಡಿತು.