ಬೆಂಗಳೂರು: ಅನೈತಿಕ ಚಟುವಟಿಕೆಗಳ ತಾಣವಾದ ಪಾದಚಾರಿ ಸುರಂಗ ಮಾರ್ಗಗಳು
ಬೆಂಗಳೂರು, ನ.25: ಜನದಟ್ಟಣೆ, ವಾಹನ ಸಂಚಾರದ ಮಧ್ಯೆ ಪಾದಚಾರಿಗಳು ರಸ್ತೆಗಳನ್ನು ದಾಟಲು ಹರಸಾಹಸ ಪಡಬೇಕಾಗುತ್ತದೆ. ಹೀಗಾಗಿಯೇ, ಸರಕಾರ, ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ಸುರಂಗ ಮಾರ್ಗಗಳನ್ನು ನಿರ್ಮಾಣ ಮಾಡಲಾಗಿರುತ್ತದೆ. ಆದರೆ, ಬೆಂಗಳೂರು ನಗರದಲ್ಲಿನ ಪಾದಚಾರಿ ಸುರಂಗ ಮಾರ್ಗಗಳು ಅನೈರ್ಮಲ್ಯ, ಅನೈತಿಕ ಚಟುವಟಿಕೆಗಳ ತಾಣಗಳಾಗಿವೆ.
ರಾಜಧಾನಿ ಬೆಂಗಳೂರು ನಗರದ ಕೇಂದ್ರ ಸ್ಥಾನ ಮೆಜೆಸ್ಟಿಕ್, ಕೆ.ಆರ್.ಮಾರುಕಟ್ಟೆ ಸೇರಿದಂತೆ ವಿವಿಧ ಕಡೆಗಳಲ್ಲಿನ ಪಾದಚಾರಿ ಸುರಂಗ ಮಾರ್ಗಗಳ ನಿರ್ಮಾಣಕ್ಕೆ ಸರಕಾರ ಕೋಟ್ಯಾಂತರ ರೂ.ಗಳನ್ನು ಖರ್ಚು ಮಾಡುತ್ತದೆ. ಆದರೆ, ಆರಂಭದಲ್ಲಿ ಸುಂದರವಾಗಿ ಕಾಣುತ್ತವೆ. ಸುರಂಗ ಮಾರ್ಗಗಳ ನಿರ್ಮಾಣದ ಸಂದರ್ಭದಲ್ಲಿ ಸೂಕ್ತವಾದ ಅಧ್ಯಯನ, ಮೂಲಭೂತ ಸೌಲಭ್ಯಗಳ ಯೋಜನೆ ರೂಪಿಸುವುದಿಲ್ಲ. ಹೀಗಾಗಿ, ಕೆಲವು ದಿನಗಳಲ್ಲಿಯೇ ಸುರಂಗ ಮಾರ್ಗಗಳಲ್ಲಿ ಜನರು ನಡೆದಾಡಲು ಭಯಪಡುವ ಸ್ಥಿತಿ ನಿರ್ಮಾಣವಾಗುತ್ತಿದೆ.
ನಗರದಲ್ಲಿ ಹಾಳಾದ ಸುರಂಗ ಮಾರ್ಗಗಳಲ್ಲಿ ಜನ ಓಡಾಡುವುದಿಲ್ಲ ಎಂದರೆ ಅದನ್ನು ಮರು ನಿರ್ಮಾಣ ಮಾಡುವುದಿಲ್ಲ ಹಾಗೂ ಅದನ್ನು ನಿರ್ವಹಣೆ ಮಾಡಲು ಸ್ಥಳೀಯ ಪಾಲಿಕೆಯೂ ಮುಂದಾಗಿಲ್ಲ. ಹೀಗಾಗಿ, ಅನೇಕ ಸುರಂಗ ಮಾರ್ಗಗಳು ಅನೈತಿಕ ಚಟುವಟಿಕೆಯ ತಾಣಗಳಾಗುತ್ತಿವೆ. ನಗರದ ಹಲವು ಸುರಂಗಗಳಲ್ಲಿ ಭದ್ರತೆಯ ದೃಷ್ಟಿಯಿಂದ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಅಲ್ಲದೆ, ಅನೈರ್ಮಲ್ಯದಿಂದಾಗಿ ಮೂಗು ಮುಚ್ಚಿಕೊಂಡು ಹೋಗಬೇಕಾದ ಸ್ಥಿತಿ ಇದೆ.
ಸುರಂಗ ಮಾರ್ಗಗಳಲ್ಲಿ ನಡೆಯುವ ಅನೈತಿಕ ಚಟುವಟಿಕೆ ತಡೆಯಲು ಸ್ಥಳೀಯ ಆಡಳಿತ ಸಂಸ್ಥೆಗಳು ನಿರ್ಲಕ್ಷ ವಹಿಸಿವೆ. ನಗರದ ಪಾದಚಾರಿ ಸುರಂಗ ಮಾರ್ಗಗಳಲ್ಲಿ ಸಂಚರಿಸುವ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಬಿಬಿಎಂಪಿ ಎಲ್ಲೆಡೆ ಸಿಸಿಟಿವಿ ಅಳವಡಿಸಬೇಕು, ಸೂಕ್ತ ಸಮಯಕ್ಕೆ ಸ್ವಚ್ಚ ಮಾಡಬೇಕು. ಭದ್ರತಾ ಸಿಬ್ಬಂದಿ ನೇಮಕ ಮಾಡಬೇಕು ಎಂಬ ಬೇಡಿಕೆಗಳು ಹಲವು ದಿನಗಳಿಂದ ಸಾರ್ವಜನಿಕರು ವಿವಿಧ ಹಂತಗಳಲ್ಲಿ ಪಾಲಿಕೆಗೆ ಮನವಿ ಮಾಡಿದ್ದಾರೆ. ಆದರೆ, ಬಿಬಿಎಂಪಿ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಪಾದಚಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಪ್ರಮುಖ ಸ್ಥಾನವಾದ ಮೆಜೆಸ್ಟಿಕ್‌ನಲ್ಲಿ ಎರಡು ಪಾದಚಾರಿ ಮಾರ್ಗಗಳಿದ್ದು, ಎರಡೂ ಮಾರ್ಗಗಳಲ್ಲಿ ಬೀದಿ ಬದಿ ವ್ಯಾಪಾರಿಗಳಿಗಾಗಿಯೇ ನಿರ್ಮಾಣವಾದಂತಿದೆ. ಮಾರ್ಗಗಳಲ್ಲಿನ ಬಹುತೇಕ ಸ್ಥಳವನ್ನು ವ್ಯಾಪಾರಿಗಳು ಆಕ್ರಮಿಸಿಕೊಂಡು ಜನರು ಓಡಾಡಲು ಕಷ್ಟಕರವಾಗಿದೆ. ಬಿಎಂಟಿಸಿ ಬಸ್ ನಿಲ್ದಾಣದಿಂದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಹಾಗೂ ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಜನ ಓಡಾಡಲು ಮುಜುಗರ ಪಡುತ್ತಿದ್ದಾರೆ. ಅಸಭ್ಯ ವರ್ತನೆ, ವೇಶ್ಯಾವಾಟಿಕೆ ನಡೆಸುವವರು ಜನರನ್ನು ಸೆಳೆಯುವ ಉದ್ದೇಶದಿಂದ ಅಸಭ್ಯವಾಗಿ ವರ್ತಿಸುತ್ತಿರುತ್ತಾರೆ. ಹೀಗಾಗಿ, ಈ ಮಾರ್ಗದಲ್ಲಿ ಸಂಚಾರಕ್ಕೆ ಹಿಂದೇಟು ಹಾಕುವ ಜನರೇ ಹೆಚ್ಚು.
ಮೆಜೆಸ್ಟಿಕ್‌ನಲ್ಲಿರುವ ಮಾರ್ಗಗಳಲ್ಲಿ ರಾತ್ರಿ ವೇಳೆ ಮಹಿಳೆಯರಷ್ಟೇ ಅಲ್ಲ ಪುರುಷರೂ ಸಂಚರಿಸಲು ಹಿಂದೆ ಸರಿಯುತ್ತಾರೆ. ಈ ಮಾರ್ಗದಲ್ಲಿ ಕಳ್ಳರ ಕಾಟ ಅಧಿಕವಾಗಿದೆ. ಲೈಂಗಿಕ ಅಲ್ಪಸಂಖ್ಯಾತರು ಮುಜುಗರ ಪಡುವ ರೀತಿಯಲ್ಲಿ ವರ್ರಿಸುತ್ತಾರೆ ಎಂದು ಪಾದಚಾರಿಗಳು ಹಲವು ಬಾರಿ ಪೊಲೀಸರಿಗೆ ದೂರು ನೀಡಿದ್ದರೂ ಕಡಿಮೆಯಾಗಿಲ್ಲ.
ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದಾದ ಕೆ.ಆರ್.ಮಾರುಕಟ್ಟೆಯಲ್ಲಿರುವ ಸುರಂಗ ಮಾರ್ಗದಲ್ಲಿ ಮಲಮೂತ್ರ ವಿಸರ್ಜನೆ ಮಾಡಿದ್ದು, ಜನ ವಾಸನೆಯಿಂದ ಮೂಗು ಮುಚ್ಚಿಕೊಂಡು ಓಡಾಡಬೇಕಾ ಸ್ಥಿತಿ ಇದೆ. ವಿಕ್ಟೋರಿಯಾ, ಮಿಂಟೋ ಮತ್ತು ವಾಣಿ ವಿಲಾಸ ಆಸ್ಪತ್ರೆಗೆ ಹೋಗುವವರು, ಹಳೆಕೋಟೆ ಶಾಲೆ, ವಾಣಿ ವಿಲಾಸ ಶಾಲೆಯ ವಿದ್ಯಾರ್ಥಿಗಳು, ಹಣ್ಣು-ಹೂವಿನ ವ್ಯಾಪಾರಿಗಳು ಹೆಚ್ಚಾಗಿ ಈ ಸುರಂಗ ಮಾರ್ಗ ಬಳಸುತ್ತಾರೆ. ಆದರೆ, ಪಾಲಿಕೆ ಇದನ್ನೂ ಗಂಭೀರವಾಗಿ ಪರಿಗಣಿಸಿಲ್ಲ.
ನೀರು ನುಗ್ಗುತ್ತವೆ: ದಿನದಲ್ಲಿ ಒಂದು ನಿಮಿಷವೂ ಬಿಡುವಿಲ್ಲದಂತೆ ವಾಹನಗಳು ಸಂಚರಿಸುವ ನಗರದ ಪುರಭವನದ ಬಳಿಯಿರುವ ಸುರಂಗ ಮಾರ್ಗದಲ್ಲಿ ಶುಚಿತ್ವ ಎದ್ದು ಕಾಣುತ್ತಿದ್ದು, ಮಳೆ ಬಂದರೆ ಸಾಕು ನೀರು ಒಳಗೆ ನುಗ್ಗುತ್ತದೆ. ಇದರಿಂದಾಗಿ ಸುರಂಗ ಮಾರ್ಗದ ಬದಲಿಗೆ ರಸ್ತೆಯಲ್ಲಿಯೇ ನಡೆದು ಹೋಗುತ್ತಿದ್ದು, ವಾಹನ ಸಂಚಾರಕ್ಕೆ ತೀವ್ರ ಅಡ್ಡಿಯಾಗುತ್ತಿದೆ.







