ಇಬ್ಬರು ನಾಯಕರ ಅಗಲಿಕೆಯಿಂದ ನಾಡು ಬಡವಾಗಿದೆ: ಸಂಸದ ಸಿದ್ದೇಶ್ವರ

ದಾವಣಗೆರೆ, ನ.25: ನಟ ಅಂಬರೀಷ್, ಮಾಜಿ ಕೇಂದ್ರ ಸಚಿವ ಜಾಫರ್ ಶರೀಫ್ ಅವರ ನಿಧನಕ್ಕೆ ಸಂಸದ ಜಿ.ಎಂ. ಸಿದ್ದೇಶ್ವರ ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು. ಚಲನಚಿತ್ರದ ಮೂಲಕ ವೃತ್ತಿ ಜೀವನ ಪ್ರಾರಂಭಿಸಿ ನೆಲ, ಜಲ, ಭಾಷೆಗಳ ವಿಷಯ ಬಂದಾಗ ಯಾವುದೇ ತ್ಯಾಗಕ್ಕೂ ಸಿದ್ದ ಎಂದು ಅನೇಕ ಬಾರಿ ಅಂಬರೀಷ್ ನಿರೂಪಿಸಿದ್ದರು. ಕೇಂದ್ರ ಸಚಿವರಾಗಿ, ರಾಜ್ಯ ಸಚಿವ ರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ, ಒಬ್ಬ ನಟರಾಗಿ ಜನಮಾನಸದಲ್ಲಿ ಸದಾಕಾಲ ಶಾಶ್ವತವಾಗಿ ಉಳಿಯುವಂತ ಕಾರ್ಯಗಳನ್ನು ಅಂಬರೀಷ್ ಮಾಡಿ ಹೋಗಿದ್ದಾರೆ ಎಂದು ಹೇಳಿದರು.
ಇನ್ನು ಜಾಪರ್ ಷರೀಫ್ ನಾಡು ಕಂಡ ಮುತ್ಸದ್ದಿ ನಾಯಕ, ರೈಲ್ವೆ ಸಚಿವರಾಗಿ ಅವರು ಮಾಡಿದ ಕೆಲಸ ಅದ್ಭುತವಾದದ್ದು, ಅವರು ಸಚಿವರಾಗಿದ್ದ ಕಾಲದಲ್ಲಿಯೇ ರೈಲ್ವೆ ಇಲಾಖೆ ಮೀಟರ್ ಗೇಜ್‌ನ್ನು ಬ್ರಾಡ್‌ಗೇಜ್‌ಆಗಿ ಪರಿವರ್ತನೆ ಮಾಡಿತು, ಷರೀಫ್ ಅವರು ರೈಲ್ವೆ ಸಚಿವರಾಗಿದ್ದಾಗ ರೈಲ್ವೆ ಇಲಾಖೆ ಮನ್ವಂತರವನ್ನು ಕಂಡಿತು ಎಂದರೆ ಪ್ರಾಯಶಃ: ಅತಿಶಯೋಕ್ತಿ ಯಾಗಲಾರದು, ಒಟ್ಟಾರೆಯಾಗಿ ಇಬ್ಬರು ನಿಷ್ಠೂರವಾದಿ ರಾಜಕಾರಿಣಿಗಳನ್ನು ಕಳೆದುಕೊಂಡು ನಾಡು ಬಡವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.







