ಹತಾಶ ಕಾಂಗ್ರೆಸ್ನಿಂದ ಓಲೈಕೆ ರಾಜಕಾರಣ: ಅಮಿತ್ ಶಾ ಆರೋಪ

ಭೋಪಾಲ್, ನ.26: ಸತತ ಸೋಲಿನಿಂತ ಹತಾಶವಾಗಿರುವ ಕಾಂಗ್ರೆಸ್ ಪಕ್ಷ ಇದೀಗ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣದಲ್ಲಿ ತೊಡಗಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಆಪಾದಿಸಿದ್ದಾರೆ.
ಮಧ್ಯಪ್ರದೇಶದಲ್ಲಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡ ಅವರು "ಟೈಮ್ಸ್ ಆಫ್ ಇಂಡಿಯಾ"ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮೇಲಿನ ಆರೋಪ ಮಾಡಿದ್ದಾರೆ.
"ಕಮಲ್ನಾಥ್ ಮಾತ್ರ ಮುಸ್ಲಿಮರನ್ನು ಓಲೈಸುತ್ತಿಲ್ಲ. ರಾಜಸ್ಥಾನದ ಹಿರಿಯ ಕಾಂಗ್ರೆಸ್ ಮುಖಂಡ ಸಿ.ಪಿ.ಜೋಶಿ ಕೂಡಾ ಪ್ರಧಾನಿಯ ಜಾತಿ ಬಗ್ಗೆ ಮಾತನಾಡಿದ್ದಾರೆ. ಇದು ಪಕ್ಷದ ಮನೋಸ್ಥಿತಿಯನ್ನು ತೋರಿಸುತ್ತದೆ. ಹತಾಶ ಕಾಂಗ್ರೆಸ್, ಹಿಂದೆ ತಿರಸ್ಕರಿಸಲ್ಪಟ್ಟ ಓಲೈಕೆ ರಾಜಕಾರಣಕ್ಕೆ ಮತ್ತೆ ಶರಣಾಗಿದೆ. ಜನರಿಗೆ ಕಾಂಗ್ರೆಸ್ನ ನಿಜ ಬಣ್ಣ ಗೊತ್ತಾಗಿದೆ. ಜಾತಿ ವಿಭಜನೆ ಮಾಡುತ್ತಿರುವುದು ಯಾರು ಹಾಗೂ ಸಮಾಜದಲ್ಲಿ ಕೋಮು ರಾಜಕೀಯ ಮಾಡುತ್ತಿರುವುದು ಯಾರು ಎನ್ನುವುದು ಜನತೆಗೆ ಗೊತ್ತಾಗಿದೆ. ಕೋಮು ರಾಜಕೀಯದಲ್ಲಿ ತೊಡಗಿದವರು ಅದರ ಪರಿಣಾಮ ಎದುರಿಸಬೇಕಾಗುತ್ತದೆ" ಎಂದು ಹೇಳಿದರು.
ಚುನಾವಣೆ ನಡೆಯುವ ರಾಜ್ಯಗಳ ಪೈಕಿ ಬಿಜೆಪಿ ಮೂರು ರಾಜ್ಯಗಳಲ್ಲಿ ಅಧಿಕಾರ ಉಳಿಸಿಕೊಳ್ಳಲಿದೆ. ಡಿಸೆಂಬರ್ 11ರಂದು ಬರುವ ಫಲಿತಾಂಶ ಮೋದಿಯವರ ವ್ಯಕ್ತಿತ್ವವನ್ನು ಮತ್ತಷ್ಟು ಎತ್ತರಕ್ಕೆ ಒಯ್ಯಲಿದ್ದು, 2019ರ ಚುನಾವಣೆಯಲ್ಲಿ ಮೋದಿ ಹೆಚ್ಚಿನ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಲಿದ್ದಾರೆ ಎಂದು ಅವರು ಭವಿಷ್ಯ ನುಡಿದರು.
ಅಯೋಧ್ಯೆ ರಾಮಮಂದಿರ ಬಗ್ಗೆ ಕೇಳಿದ ಪ್ರಶ್ನೆಗೆ, "ಭವ್ಯವಾದ ರಾಮಮಂದಿರ ನಿರ್ಮಿಸುವ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಆದರೆ ವಿವಾದ ಸುಪ್ರೀಂಕೋರ್ಟ್ನಲ್ಲಿದ್ದು, ಜನವರಿಯಲ್ಲಿ ವಿಚಾರಣೆ ನಡೆಯುವವರೆಗೂ ಕಾಯುತ್ತೇವೆ. ವಿವಾದ ಒಂಬತ್ತು ವರ್ಷಗಳಿಂದ ಬಾಕಿ ಇದ್ದರೂ, 2019ರ ಚುನಾವಣೆ ಬಳಿಕ ವಿಚಾರಣೆ ಮುಂದುವರಿಸಬೇಕು ಎಂದು ಕಪಿಲ್ ಸಿಬಲ್ ವಾದಿಸುತ್ತಲೇ ಬಂದಿದ್ದಾರೆ. ಅಖಾರಾ ವಕೀಲರು ತ್ವರಿತ ವಿಚಾರಣೆಗೆ ಆಗ್ರಹಿಸಿದ್ದರೆ, ಕಾಂಗ್ರೆಸ್ ಅದನ್ನು ವಿಳಂಬಿಸಲು ಬಯಸಿದೆ. ಆದಾಗ್ಯೂ ನಮ್ಮ ಉದ್ದೇಶದ ಬಗ್ಗೆ ಯಾರೂ ಸಂದೇಹ ಹೊಂದಬೇಕಾಗಿಲ್ಲ" ಎಂದು ಸ್ಪಷ್ಟಪಡಿಸಿದರು.