ಹೆಜಮಾಡಿ ಟೋಲ್ ಗೇಟ್ ಎದುರು ಪ್ರತಿಭಟನೆ, ಬಂಧನ
ಸ್ಥಳೀಯ ವಾಹನಗಳಿಂದ ಟೋಲ್ ಸಂಗ್ರಹಕ್ಕೆ ವಿರೋಧ

ಪಡುಬಿದ್ರೆ, ನ.26: ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿಯಲ್ಲಿರುವ ಟೋಲ್‌ಗೇಟ್‌ನಲ್ಲಿ ಸ್ಥಳೀಯ ವಾಹನಗಳಿಂದ ಟೋಲ್ ಆರಂಭಿಸಿರುವುದನ್ನು ವಿರೋಧಿಸಿ ಟೋಲ್ ವಿರೋಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಇಂದು ಟೋಲ್‌ಗೇಟ್‌ಗೆ ಮುತ್ತಿಗೆ ಹಾಕಲು ಮುಂದಾದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದರು.
ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ಪೂರ್ಣಗೊಳ್ಳದಿದ್ದರೂ ಶೇ.80ರಷ್ಟು ಕಾಮಗಾರಿಯಾಗಿದೆ ಎಂದು ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿದ ಗುತ್ತಿಗೆದಾರ ನವಯುಗ ಕಂಪೆನಿ ತರಾತುರಿಯಲ್ಲಿ ಟೋಲ್ ಸಂಗ್ರಹಕ್ಕೆ ಮುಂದಾಗಿದೆ. ಕಾಮಗಾರಿ ಪೂರ್ಣಗೊಳ್ಳದೆ ಸ್ಥಳೀಯ ವಾಹನಗಳಿಗೆ ಟೋಲ್ ಸಂಗ್ರಹಕ್ಕೆ ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಪ್ರತಿಭಟನೆಯ ಹಿನ್ನಲೆಯಲ್ಲಿ ಡಿವೈಎಸ್ಪಿ ಬೆಳ್ಳಿಯಪ್ಪ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಟೋಲ್ ಆರಂಭಿಸಿರುವ ಸುದ್ದಿ ತಿಳಿದು ಜಮಾಯಿಸಿದ ಸ್ಥಳೀಯರು ಟೋಲ್ ಸಮೀಪ ಪ್ರತಿಭಟನೆ ನಡೆಸಿದರು. ಬಳಿಕ ಟೋಲ್‌ಗೇಟ್‌ಗೆ ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರು ಅವರು ಬಂಧಿಸಿದರು.
ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ದೇವಿಪ್ರಸಾದ್ ಶೆಟ್ಟಿ, ಗುಲಾಂ ಮುಹಮ್ಮದ್, ಶೇಖರ ಹೆಜ್ಮಾಡಿ, ಸುಧೀರ್ ಕರ್ಕೇರ, ಮಧುಕರ ಆಚಾರ್ಯ, ದೇವಣ್ಣ ನಾಯಕ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಹನೀಫ್ ಹೆಜಮಾಡಿ ಮತ್ತಿತರರು ಇದ್ದರು.







