ಮಾರ್ನಮಿಕಟ್ಟೆ: ಸೀರತ್ ಸಾರ್ವಜನಿಕ ಕಾರ್ಯಕ್ರಮ

ಮಂಗಳೂರು, ನ.26: 'ಪ್ರವಾದಿ ಮುಹಮ್ಮದ್(ಸ) ಮಾನವಕುಲದ ಶ್ರೇಷ್ಠ ಮಾರ್ಗದರ್ಶಕ' ಎಂಬ ವಿಷಯದ ಮೇಲೆ ಜಮಾಅತೆ ಇಸ್ಲಾಮೀ ಹಿಂದ್ ಹಮ್ಮಿಕೊಂಡಿರುವ ರಾಜ್ಯವ್ಯಾಪಿ ಅಭಿಯಾನದ ಪ್ರಯುಕ್ತ ಜೆಪ್ಪು ಬೋಳಾರ ವರ್ತುಲದ ವತಿಯಿಂದ ನ.23ರಂದು ಜೆಪ್ಪು ಮಾರ್ನಮಿಕಟ್ಟೆಯ ಶಾಂತಿನಗರ ಮೈದಾನದಲ್ಲಿ ಸೀರತ್ ಸಾರ್ವಜನಿಕ ಸಭೆ ಜರುಗಿತು.
ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಸಲಹಾ ಸಮಿತಿಯ ಸದಸ್ಯ ಅಕ್ಬರಲಿ ಉಡುಪಿ ಮಾತನಾಡಿ, ಮದ್ಯಪಾನ, ವ್ಯಭಿಚಾರ, ಭ್ರೂಣ ಹತ್ಯೆ, ಕೊಲೆ, ದರೋಡೆ ಮುಂತಾದ ಕೆಡುಕುಗಳಲ್ಲಿ ನಿರತರಾಗಿದ್ದ ಜನರನ್ನು ಮನಪರಿವರ್ತನೆಯ ಮೂಲಕ ಒಳಿತಿನ ವಾಹಕರಾಗಿ ಬದಲಾಯಿಸಿದ ಪ್ರವಾದಿ ಮುಹಮ್ಮದ್(ಸ)ರು ಮನುಕುಲದ ಶ್ರೇಷ್ಠ ಮಾರ್ಗದರ್ಶಕರಾಗಿದ್ದಾರೆ. ಮಹಿಳೆಯರೊಂದಿಗೆ ಉತ್ತಮವಾಗಿ ವ್ಯವಹರಿಸಿರಿ, ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿರಿ. ಸಹಧರ್ಮೀಯರನ್ನು ಗೌರವಿಸಿರಿ. ಇವು ವಿಶ್ವಾಸದ ಬೇಡಿಕೆಯಾಗಿದೆ. ಪ್ರವಾದಿ(ಸ) ಈ ಉದಾತ್ತವಾದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನೈಜ ‘ಪ್ರವಾದಿ ಪ್ರೇಮ’ ಎಂದು ಹೇಳಿದರು.
ಕುದ್ರೋಳಿ ಜಾಮಿಯ ಮಸೀದಿಯ ಖತೀಬ್ ಮೌಲನಾ ಮುಫ್ತಿ ಅಬ್ದುಲ್ ಮನ್ನಾನ್ ಮಝ್ಹರಿ ಮಾತನಾಡಿ, ಪ್ರವಾದಿ(ಸ)ರ ಸಂದೇಶವನ್ನು ಅನುಸರಿಸಿದ ಅಂದಿನ ಮುಸ್ಲಿಮರ ಬಗ್ಗೆ ಜನರಲ್ಲಿ ವಿಶ್ವಾಸವಿತ್ತು. ಪ್ರವಾದಿ ಮುಹಮ್ಮದರ ಸಂದೇಶಗಳನ್ನು ಪಾಲಿಸಿ ಅನುಸರಿಸಿ ಜನರ ವಿಶ್ವಾಸಗಳಿಸ ಬೇಕಾದ ಅಗತ್ಯವಿದೆ ಎಂದರು.
'ಸಮಾಜ ಸುಧಾರಕ ಪ್ರವಾದಿ ಮುಹಮ್ಮದ್(ಸ)' ಎಂಬ ವಿಷಯದಲ್ಲಿ ಕಸ್ಬಾ ಬೆಂಗರೆಯ ಎ.ಆರ್.ಕೆ. ಸ್ಕೂಲ್ ಅಧ್ಯಾಪಕ ಅಬ್ದುಲ್ಲತೀಫ್ ಆಲಿಯಾ ಸಂದರ್ಭೋಚಿತವಾಗಿ ಮಾತನಾಡಿದರು. ಬೋಳಂಗಡಿ ಹವ್ವಾ ಮಸೀದಿಯ ಖತೀಬ್ ಸೈಯದ್ ಯಹ್ಯಾ ತಂಙಳ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಅನಸ್ ಬೋಳಾರ್ ಕಿರಾಅತ್ ಪಠಿಸಿದರು. ಅಬ್ದುಲ್ ಗಫೂರ್ ಕುಳಾಯಿ ಸ್ವಾಗತಿಸಿದರು. ರಹ್ಮತುಲ್ಲಾ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಸದೀದ್ ಪಕ್ಕಲಡ್ಕ ತರಾನಾ ಹಾಡಿದರು.