ಅಯೋಧ್ಯೆಯಲ್ಲಿ ರಾಮ ಮಂದಿರವಲ್ಲ, ಬುದ್ಧನ ದೇವಾಲಯ ಸ್ಥಾಪಿಸಬೇಕು: ಭೀಮ್ ಆರ್ಮಿ ಮುಖ್ಯಸ್ಥ
ಹೊಸದಿಲ್ಲಿ, ನ.26: ಅಯೋಧ್ಯೆಯಲ್ಲಿ ರಾಮ ಮಂದಿರವಲ್ಲ, ಬದಲಾಗಿ ಬುದ್ಧನ ದೇವಾಲಯ ಸ್ಥಾಪಿಸಬೇಕೆಂದು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಝಾದ್ ಹೇಳಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ಆದಷ್ಟು ಬೇಗ ನಿರ್ಮಾಣವಾಗಬೇಕೆಂಬ ಬೇಡಿಕೆಯೊಂದಿಗೆ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅಲ್ಲಿಗೆ ಭೇಟಿ ನೀಡಿರುವ ಹಿನ್ನೆಲೆಯಲ್ಲಿ ಹಾಗೂ ವಿಹಿಂಪ ಅಲ್ಲಿ ಧರ್ಮ ಸಭಾ ನಡೆಸಿರುವ ಬೆನ್ನಲ್ಲೇ ಚಂದ್ರಶೇಖರ್ ಈ ಹೇಳಿಕೆ ನೀಡಿದ್ದಾರೆ.
``ಅಯೋಧ್ಯೆಯ ಮೂಲ ಹೆಸರು ಸಾಕೇತ್ ಆಗಿದೆ. ಅಲ್ಲಿ ಬುದ್ಧನ ದೇವಾಲಯ ಸ್ಥಾಪಿಸಬೇಕು,'' ಎಂದು ಚಂದ್ರಶೇಖರ್ ಹೇಳಿದರು. ಇಂದು ಅಯೋಧ್ಯೆಗೆ ಸಂವಿಧಾನದ ಪ್ರತಿಯೊಂದನ್ನು ಹಿಡಿದು ತೆರಳುತ್ತಿರುವ ಚಂದ್ರಶೇಖರ್ ಅದನ್ನು ಅಲ್ಲಿನ ಜಿಲ್ಲಾ ಮ್ಯಾಜಿಸ್ಟ್ರೇಟರಿಗೆ ನೀಡಲಿದ್ದಾರೆ.
``ಭಾರತದ ಸಂವಿಧಾನ ಅಪಾಯದಲ್ಲಿದೆ. ಕೋಮುವಾದಿ ಪಕ್ಷಗಳಿಗೆ ಅಧಿಕಾರ ಬೇಕೆಂದೆನಿಸಿದಾಗ ಅವರು ಅಯೋಧ್ಯೆಗೆ ಹೋಗುತ್ತಾರೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸ್ಥಾಪನೆಗಾಗಿ ಸಂವಿಧಾನಬದ್ಧ ಕರ್ತವ್ಯಗಳನ್ನು ಜಿಲ್ಲಾ ಮ್ಯಾಜಿಸ್ಟ್ರೇಟರು ನಿರ್ವಹಿಸಬೇಕೆಂಬುದೇ ಅವರಿಗೆ ನನ್ನ ಮನವಿ'' ಎಂದು ಅವರು ಹೇಳಿದರು.