1 ಮತ್ತು 2ನೆ ತರಗತಿ ವಿದ್ಯಾರ್ಥಿಗಳಿಗೆ ಹೋಂ ವರ್ಕ್ ನೀಡುವಂತಿಲ್ಲ: ರಾಜ್ಯಗಳಿಗೆ ಸಚಿವಾಲಯ ಸೂಚನೆ
ಹೊಸದಿಲ್ಲಿ,ನ.26: ಒಂದು ಮತ್ತು ಎರಡನೇ ತರಗತಿಗಳ ಮಕ್ಕಳಿಗೆ ಇನ್ನು ಮುಂದೆ ಮನೆಗೆಲಸದ ಹೊರೆ ಇಲ್ಲ. ಜೊತೆಗೆ ಪ್ರತಿ ತರಗತಿಗೂ ವಿದ್ಯಾರ್ಥಿಗಳು ಹೊತ್ತೊಯ್ಯುವ ಚೀಲಗಳ ಭಾರಕ್ಕೂ ಮಿತಿಯನ್ನು ಹೇರಲಾಗಿದೆ. ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ(ಎಚ್‌ಆರ್‌ಡಿ)ವು ಈ ಸಂಬಂಧ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸ್ಪಷ್ಟ ನಿರ್ದೇಶಗಳನ್ನು ರವಾನಿಸಿದೆ.
ಶಾಲೆಗಳು ಎನ್‌ಸಿಇಆರ್‌ಟಿ ನಿಗದಿಗೊಳಿಸಿರುವಂತೆ ಒಂದು ಮತ್ತು ಎರಡನೇ ತರಗತಿಗಳಿಗೆ ಭಾಷೆ ಮತ್ತು ಗಣಿತ ಹಾಗೂ ಮೂರರಿಂದ ಐದರವರೆಗಿನ ತರಗತಿಗಳಿಗೆ ಭಾಷೆ,ಗಣಿತ ಹಾಗೂ ಪರಿಸರ ಅಧ್ಯಯನ(ಇತಿಹಾಸ,ಭೂಗೋಲ ಮತ್ತು ವಿಜ್ಞಾನ)ವನ್ನು ಹೊರತುಪಡಿಸಿ ಇತರ ಯಾವುದೇ ವಿಷಯವನ್ನು ನಿಗದಿಗೊಳಿಸುವಂತಿಲ್ಲ ಎಂದು ಅಧಿಕೃತ ಆದೇಶದಲ್ಲಿ ತಿಳಿಸಲಾಗಿದೆ.
ಹೆಚ್ಚುವರಿ ಪುಸ್ತಕಗಳು ಮತ್ತು ಹೆಚ್ಚುವರಿ ಸಾಮಗ್ರಿಗಳನ್ನು ತರುವಂತೆ ವಿದ್ಯಾರ್ಥಿಗಳಿಗೆ ಸೂಚಿಸುವಂತಿಲ್ಲ ಹಾಗೂ ಶಾಲಾಚೀಲಗಳ ಭಾರ ನಿಗದಿತ ಮಿತಿಯನ್ನು ಮೀರುವಂತಿಲ್ಲ ಎಂದೂ ಆದೇಶವು ತಿಳಿಸಿದೆ.
ಶಾಲಾಚೀಲಗಳ ತೂಕವು ಒಂದು ಮತ್ತು ಎರಡನೇ ತರಗತಿಗಳ ವಿದ್ಯಾರ್ಥಿಗಳಿಗೆ 1.5 ಕೆಜಿಮೀರುವಂತಿಲ್ಲ ಮತ್ತು ಮೂರರಿಂದ ಐದನೇ ತರಗತಿವರೆಗಿನ ಮಕ್ಕಳಿಗೆ ಎರಡರಿಂದ ಮೂರು ಕೆಜಿಗಳೊಳಗೆ ಇರಬೆಕು. ಈ ಮಿತಿಯನ್ನು ಆರು ಮತ್ತು ಏಳನೇ ತರಗತಿಗಳ ವಿದ್ಯಾರ್ಥಿಗಳಿಗೆ ನಾಲ್ಕು ಕೆಜಿ ಹಾಗೂ ಎಂಟು ಮತ್ತುಒಂಭತ್ತನೇ ತರಗತಿಗಳ ವಿದ್ಯಾರ್ಥಿಗಳಿಗೆ 4.5 ಕೆಜಿಗೆ ನಿಗದಿಗೊಳಿಸಲಾಗಿದೆ.
10ನೇ ತರಗತಿಯ ವಿದ್ಯಾರ್ಥಿಗಳ ಶಾಲಾಚೀಲಗಳ ಭಾರ ಐದು ಕೆಜಿಯನ್ನು ಮೀರುವಂತಿಲ್ಲ ಎಂದೂ ಆದೇಶದಲ್ಲಿ ತಿಳಿಸಲಾಗಿದೆ.