ಅಂಜುಮನ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಾರ್ಷಿಕೋತ್ಸವ ಸಮಾರಂಭ

ಭಟ್ಕಳ,ನ.26: ಇಲ್ಲಿನ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮನ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಾರ್ಷಿಕೋತ್ಸವ ಸಮಾರಂಭ ಜರಗಿತು.
ಮುಖ್ಯಅತಿಥಿಯಾಗಿ ಉಪಸ್ಥಿತರಿದ್ದ ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತ ಸಾಜಿದ್ ಮುಲ್ಲಾ ಮಾತನಾಡಿ, ಶಿಕ್ಷಕ ತರಬೇತಿಯನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಶುಭವನ್ನು ಹಾರೈಸಿ, ಶಿಕ್ಷಕ ತರಬೇತಿ ಪಡೆದವರು ಕೇವಲ ಶಿಕ್ಷಕ ವೃತ್ತಿಯೊಂದನ್ನೇ ಅವಲಂಬಿಸದೆ ಮುಂದೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದರ ಮೂಲಕ ಉನ್ನತ ಹುದ್ದೆಗಳನ್ನೂ ಅಲಂಕರಿಸಬಹುದಾಗಿದೆ ಎಂದರು.
ಉಪನಿರ್ದೇಶಕ ನಾರಾಯಣ ನಾಯಕ ಮಾತನಾಡಿ, ಸಮಾಜ ಉತ್ತಮ ಶಿಕ್ಷಕರನ್ನು ಗೌರವಿಸುತ್ತದೆ. ಸಮಾಜಮುಖಿ ಚಿಂತನೆಗಳನ್ನು ಬೆಳೆಸಿಕೊಳ್ಳುವುದರ ಮೂಲಕ ಸಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದ ಅವರು, ಬಿಇಡ್ ತರಗತಿಯಲ್ಲಿ ಕಲಿತದನ್ನು ಶಿಕ್ಷಣ ಕ್ಷೇತ್ರದಲ್ಲಿ ಪ್ರಯೋಗಿಕವಾಗಿ ಮಾಡಿ ತೋರಿಸಬೇಕು. ಇಂದಿನ ವಿದ್ಯಾರ್ಥಿಗಳು ಪ್ರತಿಭಾವಂತರಾಗಿದ್ದಾರೆ. ಹಿಂದಿನ ಮತ್ತು ಇಂದಿನ ಮಕ್ಕಳಿಗೆ ಹೋಲಿಕೆ ಮಾಡಿದಾಗ ಇಂದಿನ ಮಕ್ಕಳು ಹೆಚ್ಚು ಬುದ್ದಿವಂತರಾಗಿರುವುದನ್ನು ನಾವು ಕಾಣುತ್ತೇವೆ. ಇಂತಹ ವಿದ್ಯರ್ಥಿಗಳೊಂದಿಗೆ ಶಿಕ್ಷಕರಾದವರು ಹೇಗೆ ಪಾಠ ಮಾಡಬೇಕು, ಅದಕ್ಕೆ ಹೇಗೆ ಸಿದ್ದತೆ ನಡೆಸಬೇಕು ಎಂಬುದನ್ನು ಅರಿತುಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು. ಸಂಸ್ಥೆಯ ಪದವಿ ಕಾಲೇಜ್ ಬೋರ್ಡ್ ಕಾರ್ಯದರ್ಶಿ ಮೋಹಸಿನ್ ಶಾಬಂದ್ರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಿದ್ದಿಖ್ ಇಸ್ಮಾಯಿಲ್, ಕಾಲೇಜಿನ ಪ್ರಾಂಶುಪಾಲೆ ಡಾ.ಝಕಿಯಾ, ಕಾಲೇಜ್ ಬೋರ್ಡ್ ಕಾರ್ಯದರ್ಶಿ ಆಫ್ತಾಬ್ ಖಮರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಶಿಕ್ಷಣಾರ್ಥಿಗಳಾದ ಸಬಾ ಆಫ್ರೀನ್ ಸ್ವಾಗತಿಸಿದರು. ಪ್ರತೀಕ್ಷ ಮತ್ತು ಸುಚಿತ್ರ ನಾಯ್ಕ ಅತಿಥಿಗಳನ್ನು ಪರಿಚಯಿಸಿದರು. ಈ ಸಂದರ್ಭದಲ್ಲಿ ವರ್ಷದ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿಯನ್ನು ಪ್ರಶಿಕ್ಷಣಾರ್ಥಿ ಅಲ್ಮಾಸ್ ನೂರ್ ಗೆ ಪ್ರದಾನಿಸಲಾಯಿತು.