ದ.ಕ.ಜಿಲ್ಲಾ ಕಾಂಗ್ರೆಸ್‌ನಿಂದ ಅಂಬರೀಷ್, ಜಾಫರ್ ಶರೀಫ್‌ಗೆ ಶ್ರದ್ಧಾಂಜಲಿ

ಮಂಗಳೂರು, ನ.26:ಹಿರಿಯ ಕಾಂಗ್ರೆಸ್ ಮುಖಂಡರು ಹಾಗೂ ಮಾಜಿ ಕೇಂದ್ರ ಸಚಿವರಾದ ಅಂಬರೀಷ್ ಮತ್ತು ಜಾಫರ್ ಶರೀಫ್ ಅವರಿಗೆ ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಪಕ್ಷದ ಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆಯು ಸೋಮವಾರ ಜರುಗಿತು.
ಮಾಜಿ ಸಚಿವ ರಮಾನಾಥ ರೈ ಮಾತನಾಡಿ ಇಬ್ಬರು ನಾಯಕರ ಅಗಲಿಕೆಯು ಪಕ್ಷ ಹಾಗೂ ನಾಡಿಗೆ ತುಂಬಲಾರದ ನಷ್ಟವಾಗಿದೆ. ಜಾಫರ್ ಶರೀಫ್ ರೈಲ್ವೆ ಇಲಾಖೆಗೆ ಕಾಯಕಲ್ಪ ತಂದಿದ್ದರು. ಕರ್ನಾಟಕಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದರು. ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿದ್ದ ಜಾಫರ್ ಶರೀಫ್ ಹಂತ ಹಂತವಾಗಿ ಪಕ್ಷದಲ್ಲಿ ಬೆಳೆದರಲ್ಲದೆ ಮಾಜಿ ಪ್ರಧಾನಿ ಇಂದಿರಾಗಾಂಧಿಯ ಆಪ್ತರಲ್ಲಿ ಒಬ್ಬರಾಗಿಯೂ ಗುರುತಿಸಿದ್ದರು. ಸಮಾಜದ ಎಲ್ಲಾ ಜನರ ಪ್ರೀತಿ ವಿಶ್ವಾಸ ಗಳಿಸಿದ್ದರು. ಜಾತ್ಯತೀತ ನಿಲುವು ಹೊಂದಿದ್ದ ಅವರು ಸಾಮಾಜಿಕ ನ್ಯಾಯದ ಹರಿಕಾರರಾಗಿಯೂ ಗುರುತಿಸಲ್ಪಟ್ಟಿದ್ದರು. ಅಂಬರೀಷ್ ಚಿತ್ರನಟ, ರಾಜಕಾರಣಿಯಾಗುವ ಮುಂಚೆಯೇ ನನಗೆ ಚಿರಪರಿಚಿತ. ಮೈಸೂರಿನಲ್ಲಿ ನಾವಿಬ್ಬರು ಓದುತ್ತಿದ್ದಾಗಲೇ ಸ್ನೇಹಿತರಾಗಿದ್ದೆವು. ರಾಜಕೀಯದಲ್ಲಿ ಸಕ್ರಿಯರಾದ ಬಳಿಕ ಸಹಪಾಠಿಗಳಾಗಿಯೂ ಕೆಲಸ ಮಾಡಿದೆವು ಎಂದರು.
ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ ಸವಾಲುಗಳನ್ನು ಎದುರಿಸುವ ಛಾತಿಯುಳ್ಳ ಈ ಇಬ್ಬರು ನಾಯಕರು ಪಕ್ಷದಲ್ಲಿ ತಮ್ಮದೇ ಆದ ವರ್ಛಸ್ಸು ಹೊಂದಿದ್ದರು. ಮಾಜಿ ಪ್ರಧಾನಿ ಇಂದಿರಾಗಾಂಧಿಯನ್ನು ಪಕ್ಷೀಯರೇ ಹಿಮ್ಮೆಟ್ಟಿಸುವ ಕೆಲಸದಲ್ಲಿ ತೊಡಗಿದಾಗ ಜಾಫರ್ ಶರೀಫ್ ಇಂದಿರಾಗಾಂಧಿಯ ಪರ ನಿಂತು ಗಮನ ಸೆಳೆದಿದ್ದರು. ಅಚ್ಚ ಕನ್ನಡಿಗನಾಗಿ ಎಲ್ಲರ ಹೃದಯ ಗೆದ್ದಿದ್ದರು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಹಾಗೂ ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪಕ್ಷದ ಮುಖಂಡರಾದ ಇಬ್ರಾಹೀಂ ಕೋಡಿಜಾಲ್, ಶಶಿಧರ ಹೆಗ್ಡೆ, ಸಂತೋಷ್ ಶೆಟ್ಟಿ, ಟಿ.ಎಸ್.ಅಬ್ದುಲ್ಲಾ, ಪುರುಷೋತ್ತಮ ಚಿತ್ರಾಪುರ, ಕೆ.ಕೆ.ಶಾಹುಲ್ ಹಮೀದ್, ಮುಹಮ್ಮದ್ ಮೋನು, ಎನ್.ಎಸ್.ಕರೀಂ, ಎಚ್.ಅಶ್ರಫ್, ಈಶ್ವರ ಉಳ್ಳಾಲ್, ನವೀನ್ ಡಿಸೋಜ, ಸದಾಶಿವ ಉಳ್ಳಾಲ್ ಮತ್ತಿತರರು ಉಪಸ್ಥಿತರಿದ್ದರು.