ಬಿಜೆಪಿ, ಸಂಘಪರಿವಾರದಿಂದ ಮಹಿಳಾ ವಿರೋಧಿ ನಿಲುವು: ಯಮುನಾ ಗಾಂವ್ಕರ್
ದ.ಕ.ಜಿಲ್ಲಾ ಅಕ್ಷರ ದಾಸೋಹ ನೌಕರರ ಸಮ್ಮೇಳನ

ಮಂಗಳೂರು, ನ.26: ಶಬರಿಮಲೆಯ ಅಯ್ಯಪ್ಪಸ್ವಾಮಿಯ ದರ್ಶನ ಪಡೆಯಲು ಮಹಿಳೆಯರು ಅರ್ಹರು ಎಂದು ಸುಪ್ರೀಂ ಕೋರ್ಟ್ ಚಾರಿತ್ರಿಕ ತೀರ್ಪು ನೀಡಿದ್ದರೂ ಕೂಡಾ ಬಿಜೆಪಿ ಮತ್ತು ಸಂಘಪರಿವಾರ ಅದನ್ನು ವಿರೋಧಿಸುವ ಮೂಲಕ ಮಹಿಳಾ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಸಾಹಿತಿ ಹಾಗೂ ಕಾರ್ಮಿಕ ನಾಯಕಿ ಯಮುನಾ ಗಾಂವ್ಕರ್ ಆರೋಪಿಸಿದರು.
ನಗರದಲ್ಲಿ ರವಿವಾರ ನಡೆದ ದ.ಕ.ಜಿಲ್ಲಾ ಅಕ್ಷರದಾಸೋಹ ನೌಕರರ 7ನೇ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮಹಿಳೆಯರನ್ನು ಮಾತೆಯರೆಂದು ಮೊಸಳೆ ಕಣ್ಣೀರಿಡುವ ಸಂಘ ಪರಿವಾರದ ಮಹಿಳಾ ವಿರೋಧಿ ನೀತಿ ಬಯಲಾಗುತ್ತಲೇ ಇದೆ ಎಂದ ಯಮುನಾ ಗಾಂವ್ಕರ್ ಪಿಣರಾಯ್ ವಿಜಯನ್ ನೇತೃತ್ವದ ಕೇರಳ ಎಡರಂಗ ಸರಕಾರದ ಜನಪರ ನೀತಿ ಹಾಗೂ ಸಂವಿಧಾನಬದ್ಧ ಸುಪ್ರೀಂಕೋರ್ಟ್‌ನ ತೀರ್ಪನ್ನು ಜಾರಿಗೊಳಿಸುವ ಮುತುವರ್ಜಿಯನ್ನು ಶ್ಲಾಘಿಸಿದರು.
ಸಿಐಟಿಯು ದ.ಕ.ಜಿಲ್ಲಾಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ ಮಾತನಾಡಿ ಅಕ್ಷರದಾಸೋಹ ನೌಕರರಿಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ 1,000 ರೂ. ವೇತನ ಏರಿಕೆ ಮಾಡುವುದಾಗಿ 2014ರಲ್ಲಿ ಭರವಸೆ ನೀಡಿತ್ತು. ಆದರೆ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಅದನ್ನು ಜಾರಿಗೊಳಿಸಲು ಮುಂದಾಗುತ್ತಿಲ್ಲ. ಬದಲಾಗಿ ಪೆಟ್ರೋಲ್, ಡೀಸೆಲ್ ದರವನ್ನು ವಿಪರೀತ ಏರಿಕೆ ಮಾಡಿ ಜನಸಾಮಾನ್ಯರ ಬದುಕಿನ ಮೇಲೆ ಚೆಲ್ಲಾಟವಾಡುತ್ತಿದೆ ಎಂದರು.
2019ರ ಜನವರಿ 8 ಮತ್ತು 9ರ ಕಾರ್ಮಿಕ ಸಂಘಟನೆಗಳ ಸಾರ್ವತ್ರಿಕ ಮುಷ್ಕರಕ್ಕೆ ಬೆಂಬಲ ಹಾಗೂ ಕೇಂದ್ರ ಸರಕಾರ ಬಿಸಿಯೂಟ ಕಾರ್ಮಿಕರಿಗೆ ತಾತ್ಕಾಲಿಕವಾಗಿ 5,000 ರೂ. ವೇತನ ಏರಿಕೆ ಮಾಡುವ ನಿರ್ಣಯವನ್ನು ಸಮ್ಮೇಳನವು ಅಂಗೀಕರಿಸಿತು.
ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ ಜಯಂತಿ ಬಿ.ಶೆಟ್ಟಿ, ಸಿಐಟಿಯು ನಾಯಕರಾದ ವಸಂತ ಆಚಾರಿ, ರಾಬರ್ಟ್ ಡಿಸೋಜ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಗಿರಿಜಾ ವರದಿ ವಾಚಿಸಿದರು. ಭವ್ಯಾ ಲೆಕ್ಕಪತ್ರ ಮಂಡಿಸಿದರು.
ಸಮ್ಮೇಳನದಲ್ಲಿ ಜಿಲ್ಲಾಧ್ಯಕ್ಷರಾಗಿ ಪದ್ಮಾವತಿ ಶೆಟ್ಟಿ, ಉಪಾಧ್ಯಕ್ಷರಾಗಿ ಶೋಭಾ, ಅನಿತಾ, ರೇಖಲತಾ, ಲಲಿತಾ ಬೆಳ್ತಂಗಡಿ, ಶ್ರೀಮತಿ, ಲತಾ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಗಿರಿಜಾ, ಕಾರ್ಯದರ್ಶಿಯಾಗಿ ಬಬಿತಾ, ಲೀಲಾವತಿ, ಹೇಮಲತಾ, ಪ್ರಮೀಳಾ, ಶಾಂತಾ, ಸುಮಿತ್ರಾ ಬೆಳ್ತಂಗಡಿ, ಖಜಾಂಚಿಯಾಗಿ ಭವ್ಯಾ ಹಾಗೂ 21 ಮಂದಿಯ ಜಿಲ್ಲಾ ಸಮಿತಿಯನ್ನು ಚುನಾಯಿಸಲಾಯಿತು.