ಹಾಲಿನ ಗುಣಮಟ್ಟಕ್ಕೆ ಹೆಚ್ಚಿನ ಪ್ರಾಶಸ್ತ್ಯ ಅಗತ್ಯ: ರವಿರಾಜ್ ಹೆಗ್ಡೆ

ಉಡುಪಿ, ನ.26: ಹಾಲಿನ ಉದ್ಯಮದಲ್ಲಿ ಪ್ರಾಮಾಣಿಕತೆ ಇರಬೇಕು ಮತ್ತು ಗುಣಮಟ್ಟಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಹಾಲಿನಲ್ಲಿ ಆ್ಯಂಟಿ ಬಯೋಟಿಕ್ಸ್ ಇಲ್ಲದಂತಹ ವ್ಯವಸ್ಥೆಗೆ ನಮ್ಮ ಹೈನುಗಾರರು ಸಿದ್ಧರಾಗಬೇಕು ಮತ್ತು ಬದ್ಧರಾಗಬೇಕು ಎಂದು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೊಡವೂರು ರವಿರಾಜ್ ಹೆಗ್ಡೆ ಹೇಳಿದ್ದಾರೆ.
ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ಡಾ. ವರ್ಗೀಸ್ ಕುರಿಯರ್ ಜನ್ಮದಿನದಂದು ಆಚರಿಸಲಾದ ರಾಷ್ಟ್ರೀಯ ಹಾಲು ದಿನಾಚರಣೆ ಪ್ರಯುಕ್ತ ಅಜ್ಜರಕಾಡು ಪುರಭವನದಲ್ಲಿ ಸೋಮವಾರ ಆಯೋಜಿಸಲಾದ ಎನ್‌ಡಿಪಿ ನೆರವಿನೊಂದಿಗೆ ತಾಂತ್ರಿಕ ಉಪನ್ಯಾಸ ಹಾಗೂ ಐಎನ್‌ಎಪಿಎಚ್ ಮತ್ತು ಕೆಚ್ಚಲು ಬಾವು ನಿಯಂತ್ರಣ ಕಾರ್ಯಕ್ರಮದ ಸಮಾರೋಪದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ತಂತ್ರಜ್ಞಾನವನ್ನು ಅಳವಡಿಸಿಕೊಂಡು ಆಸಕ್ತಿಯಿಂದ ಶ್ರಮ ವಹಿಸಿದರೆ ಹೈನುಗಾರಿಕೆಯಲ್ಲಿ ಯಶಸ್ಸು ಗಳಿಸಲು ಸಾಧ್ಯ. ಇಂದು ಹಾಲಿಗೆ ನಿರ್ದಿಷ್ಟವಾದ ದರ ಸಿಗುತ್ತಿದ್ದರೆ ಅದಕ್ಕೆ ಈ ರೀತಿಯ ವ್ಯವಸ್ಥೆಯನ್ನು ಹುಟ್ಟಿ ಹಾಕಿದ ಕುರಿಯನ್ ಕಾರಣ. ಮುಂದಿನ ದಿನಗಳಲ್ಲಿ ಒಕ್ಕೂಟ, ಹೈನುಗಾರರ ಪ್ರಗತಿ ಹಾಗೂ ಗ್ರಾಹಕರಿಗೆ ಗುಣಮಟ್ಟದ ಹಾಲನ್ನು ನೀಡುವಂತಹ ಪೂರಕವಾದ ವಾತಾವರಣವನ್ನು ನಾವು ನಿರ್ಮಿಸಬೇಕಾಗಿದೆ ಎಂದರು.
ಒಂದು ವೇಳೆ ಹಾಲಿಗೆ ಈಗ ಇರುವ ಸಹಕಾರಿ ವ್ಯವಸ್ಥೆ ಇಲ್ಲದಿರುತಿದ್ದರೆ ಅದು ಟಾಟಾ, ರಿಲಯನ್ಸ್ ನಂತಹ ಖಾಸಗಿ ಬಂಡವಾಳಶಾಹಿಗಳು ಪಾಲಾಗಿ ಲಾಭದ ಲೆಕ್ಕಾಚಾರದೊಂದಿಗೆ ವ್ಯವಹಾರ ನಡೆಯುತ್ತಿತ್ತು. ಅಲ್ಲಿ ಸಿಗುವ ಲಾಭ ನೇರವಾಗಿ ಖಾಸಗಿಯವರಿಗೆ ದೊರೆಯುತ್ತಿತ್ತು. ಆದರೆ ಈಗಿರುವ ಸಹಕಾರಿ ವ್ಯವಸ್ಥೆಯಲ್ಲಿ ಬಂದ ಲಾಭವನ್ನು ಸದಸ್ಯರಿಗೆ ಹಂಚಲಾಗುತ್ತದೆ ಎಂದು ಅವರು ತಿಳಿಸಿದರು.
ಉಪ್ಪೂರಿನಲ್ಲಿ ನಿರ್ಮಾಣವಾಗುತ್ತಿರುವ ನೂತನ ಡೈರಿಯ ಉದ್ಘಾಟನೆಯು ಮುಂದಿನ ಎರಡು ತಿಂಗಳೊಳಗೆ ನಡೆಯಲಿದೆ ಎಂದು ಅವರು ಹೇಳಿದರು.
ಕರ್ನಾಟಕ ಹಾಲು ಮಹಾಮಂಡಳಿಯ ನಿರ್ದೇಶಕ ಡಾ.ಡಿ.ಎನ್.ಹೆಗಡೆ ತಾಂತ್ರಿಕ ಉಪನ್ಯಾಸ ನೀಡಿದರು. ಒಕ್ಕೂಟದ ಉಪಾಧ್ಯಕ್ಷ ಸುಚರಿತ್ ಶೆಟ್ಟಿ ಕೆಚ್ಚಲು ಬಾವು ನಿಯಂತ್ರಣ ಸಾಮಾಗ್ರಿಗಳನ್ನು ವಿತರಿಸಿದರು. ಮಾ-ನಂದಿನಿ ಸದಸ್ಯತ್ವ ಹಾಗೂ ಷೇರುಪ್ರವನ್ನು ಬಿಡುಗಡೆಗೊಳಿಸಲಾಯಿತು.
ಜಿಪಂ ಸದಸ್ಯ ಉದಯ ಕೋಟ್ಯಾನ್, ನಿರ್ದೇಶಕರುಗಳಾದ ಪದ್ಮನಾಭ ಶೆಟ್ಟಿ ಅರ್ಕಜೆ, ಜಾನಕಿ ಹಂದೆ, ಕೃಷ್ಣ ಭಟ್, ವೀಣಾ ಆರ್.ರೈ, ಸುರೇಶ್ ಶೆಟ್ಟಿ ತೆಕ್ಕಟ್ಟೆ, ರಾಜೀವ ಶೆಟ್ಟಿ, ಅಶೋಕ್ ಕುಮಾರ್ ಶೆಟ್ಟಿ, ಉಡುಪಿ ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಸವೋತ್ತಮ ಉಡುಪ, ಬೆಂಗಳೂರು ಎನ್‌ಡಿ ಡಿಬಿಯ ಡಾ.ಕುೃಷ್ಣಾ, ಹಿರಿಯಡ್ಕ ಸರಕಾರಿ ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ.ನಿಕೇತನ, ಮಾ-ನಂದಿನಿ ಅಧ್ಯಕ್ಷೆ ಸವಿತಾ, ಡಾ.ಆನಂದರಾಜ್ ಮೊದಲಾದವರು ಉಪಸ್ಥಿತರಿದ್ದರು.
ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ವಿ.ಸತ್ಯನಾರಾಯಣ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕ ಕಾಪು ದಿವಾಕರ ಶೆಟ್ಟಿ ವಂದಿಸಿ ದರು. ಸಹಾಯಕ ವ್ಯವಸ್ಥಾಪಕರಾದ ಸುಧಾಕರ್ ಹಾಗೂ ಶಂಕರ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.







