ಅಂಬಿ ಅಂತ್ಯ ಸಂಸ್ಕಾರದ ವೇಳೆ ಹಠಾತ್ತನೆ ಕುಸಿದುಬಿದ್ದ ಸುಮಲತಾ

ಬೆಂಗಳೂರು, ನ. 26: ಕೇಂದ್ರದ ಮಾಜಿ ಸಚಿವ ಹಾಗೂ ಹಿರಿಯ ನಟ ಅಂಬರೀಶ್ ನಿಧನದ ಹಿನ್ನೆಲೆಯಲ್ಲಿ ತೀವ್ರ ಆಘಾತಕ್ಕೆ ಒಳಗಾಗಿದ್ದ ಪತ್ನಿ ಸುಮಲತಾ ಅವರಿಂದು ಪತಿ ಅಂತ್ಯ ಸಂಸ್ಕಾರದ ವೇಳೆ ಪಾರ್ಥಿವ ಶರೀರದ ಎದುರೆ ಕುಸಿದು ಬಿದ್ದು ಅಸ್ವಸ್ಥರಾದರು.
ಕೂಡಲೇ ಅವರಿಗೆ ನೀರು ಕುಡಿಸಿ ಆರೈಕೆ ಮಾಡಲಾಯಿತು. ಸ್ಥಳದಲ್ಲೆ ಇದ್ದ ವಿಕ್ರಂ ಆಸ್ಪತ್ರೆಯ ವೈದ್ಯರು ಸುಮಲತಾ ಅವರ ಆರೋಗ್ಯವನ್ನು ಪರೀಕ್ಷಿಸಿದರು. ಆ ಬಳಿಕ ಕೊಂಚ ಚೇತರಿಸಿಕೊಂಡ ಸುಮಲತಾ ಅಂತ್ಯ ಸಂಸ್ಕಾರ ವಿಧಿ-ವಿಧಾನಗಳನ್ನು ನೆರವೇರಿಸಿದರು.
ಶನಿವಾರ ರಾತ್ರಿ ಅಂಬರೀಶ್ ನಿಧನರಾಗಿದ್ದು, ಆಗಿನಿಂದಲೂ ತೀವ್ರ ದುಃಖದಿಂದ ಅತ್ತು-ಅತ್ತು ನಿತ್ರಾಣಗೊಂಡಿದ್ದರು. ಅಲ್ಲದೆ, ನೀರು, ಊಟ-ತಿಂಡಿ, ನಿದ್ರೆ ಇಲ್ಲದೆ ನಿತ್ರಾಣಗೊಂಡಿದ್ದು, ಅಂಬರೀಶ್ ಅವರ ಪಾರ್ಥಿವ ಶರೀರ ಮೆರವಣಿಗೆಯಲ್ಲಿ ಕಂಠೀರವ ಸ್ಟುಡಿಯೋ ತಲುಪುತ್ತಿದ್ದಂತೆ ಸುಮಲತಾ ಹಠಾತ್ತನೆ ಕುಸಿದು ಬಿದ್ದರು.
ತಕ್ಷಣವೇ ಸ್ಥಳದಲ್ಲಿದ್ದ ಸಚಿವ ಡಿ.ಕೆ.ಶಿವಕುಮಾರ್, ಶಾಸಕ ಮುನಿರತ್ನ ಸೇರಿದಂತೆ ಅನೇಕರು ಸುಮಲತಾ ಅವರ ನೆರವಿಗೆ ಧಾವಿಸಿದರು. ಆನಂತರ ವೈದ್ಯರು ಪರೀಕ್ಷಿಸಿ ನೀರು ಕುಡಿಸಿದರು. ನಿನ್ನೆ ಅಂಬಿ ಪಾರ್ಥಿವ ಶರೀರವನ್ನು ಅವರ ಹುಟ್ಟೂರು ಮಂಡ್ಯಕ್ಕೆ ತೆಗೆದುಕೊಂಡು ಹೋಗಲಾಗಿತ್ತು. ಅಲ್ಲಿಯೂ ನಿನ್ನೆ ಸಂಜೆಯಿಂದ ಇಂದು ಬೆಳಗಿನವರೆಗೆ ಅಭಿಮಾನಿಗಳಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಅಲ್ಲಿಂದ ಇಂದು ಬೆಳಗ್ಗೆ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತಂದಿದ್ದು, ಇಲ್ಲಿನ ಕಂಠೀರವ ಕ್ರೀಡಾಂಗಣದಿಂದ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಕಂಠೀರವ ಸ್ಟುಡಿಯೋಗೆ ಕರೆತಂದು ಅಂತ್ಯಸಂಸ್ಕಾರ ಮಾಡಲಾಯಿತು. ಈ ವೇಳೆ ಪಾರ್ಥಿವ ಶರೀರದ ಹತೆಯೇ ಸುಮಲತಾ ಇದ್ದರು. ಹೀಗಾಗಿ ಅವರು ಪತಿಯ ಅಗಲಿಕೆಯ ಶೋಕದಿಂದ ಕಂಗಾಲಾಗಿ ಕುಸಿದು ಬಿದ್ದರೆಂದು ಗೊತ್ತಾಗಿದೆ.







