ಉಡುಪಿ: ಶ್ರೀಕೃಷ್ಣ ಮಠದ ಗರ್ಭಗುಡಿಗೆ ಬಂಗಾರದ ಹೊದಿಕೆ

ಉಡುಪಿ, ನ.26: ಉಡುಪಿ ಶ್ರೀಕೃಷ್ಣ ಮಠದ ಗರ್ಭಗುಡಿಯ ಮೇಲ್ಚಾವಣಿಗೆ ಬಂಗಾರದ ತಗಡು ಹೊದಿಸುವ ಪರ್ಯಾಯ ಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರ ಮಹತ್ವಾಕಾಂಕ್ಷಿ ಯೋಜನೆಗೆ ನ.28ರ ಬುಧವಾರ ಚಾಲನೆ ದೊರೆಯಲಿದೆ.
ಸೋಮವಾರ ಶ್ರೀಕೃಷ್ಣಮಠದ ಕನಕಮಂಟಪದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯದ ತಿಳಿಸಿದ ಪಲಿಮಾರುಶ್ರೀಗಳು, ಶ್ರೀಕೃಷ್ಣ ಮಠದ ಗರ್ಭಗುಡಿಯ ಗೋಪುರಕ್ಕೆ 100 ಕೆ.ಜಿ.ಬಂಗಾರದ ತಗಡು ಹೊದಿಸುವ ಕಾರ್ಯಕ್ಕೆ ನ. 28ರ ಬೆಳಗ್ಗೆ 7:30ಕ್ಕೆ ಚಾಲನೆ ನೀಡಲಾಗುವುದು ಎಂದರು.
ಈ ಮಹತ್ವದ ಯೋಜನೆಗೆ ಒಟ್ಟು 100 ಕೆ.ಜಿ.ಬಂಗಾರದ ಅಗತ್ಯವಿದೆ. ಈಗಾಗಲೇ ಸುಮಾರು 60ಕೆ.ಜಿ.ಗಿಂತ ಹೆಚ್ಚು ಬಂಗಾರ ಸಂಗ್ರಹವಾಗಿದೆ. ಇನ್ನು 40 ಕೆ.ಜಿಯಷ್ಟು ಚಿನ್ನದ ಅಗತ್ಯವಿದೆ. ಸುಮಾರು 32 ಕೋಟಿ ರೂ.ವೆಚ್ಚದ ಯೋಜನೆ ಇದಾಗಿದ್ದು, ಶ್ರೀಕೃಷ್ಣ ಮಠದ ಗರ್ಭಗುಡಿಯ ಒಟ್ಟು 2500 ಚದರ ಅಡಿ ಮೇಲ್ಚಾವಣಿಗೆ ಚಿನ್ನದ ತಗಡನ್ನು ಮಡಾಯಿಸಬೇಕಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು, ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥರು, ಅದಮಾರು ಮಠದ ಹಿರಿಯ ಯತಿ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು ಹಾಗೂ ಶ್ರೀಈಶಪ್ರಿಯ ತೀರ್ಥ ಶ್ರೀಪಾದರು, ಶ್ರೀಸೋಸಲೆ ವ್ಯಾಸರಾಜಮಠದ ಶ್ರೀವಿದ್ಯಾಶ್ರೀಶ ತೀರ್ಥ ಶ್ರೀಪಾದರು ಮತ್ತು ಶ್ರೀಸುವಿದ್ಯೇಂದ್ರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಸಮಾರಂಭ ನಡೆಯಲಿದೆ ಎಂದವರು ವಿವರಿಸಿದರು.
ಪರ್ಯಾಯ ಪಲಿಮಾರುಶ್ರೀಗಳು ಸುವರ್ಣಗೋಪುರದ ಕಾರ್ಯಾ ರಂಭೋತ್ಸವವನ್ನು ನೆರವೇರಿಸಿದರೆ, ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಡಾ. ಜಯಮಾಲಾ, ಉಡುಪಿ ಶಾಸಕ ಕೆ. ರಘುಪತಿ ಭಟ್, ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ, ಹೊಸಪೇಟೆ ಉದ್ಯಮಿ ಪತ್ತಿಕೊಂಡ ಪ್ರಭಾಕರ್, ಉಡುಪಿ ಜಿಲ್ಲಾ ಜ್ಯುವೆಲ್ಲರ್ಸ್ ಎಸೋಸಿಯೇಶನ್ ಅಧ್ಯಕ್ಷ ಜಯ ಆಚಾರ್ಯ ಪಾಲ್ಗೊಳ್ಳಲಿದ್ದಾರೆ.
ವಿಶ್ವ ಕಲ್ಯಾಣಾರ್ಥ ಕೈಗೊಂಡ ವಿವಿಧ ಯೋಜನೆಗಳಲ್ಲಿ ಶ್ರೀಕೃಷ್ಣ ದೇವರಿಗೆ ಸುವರ್ಣ ಗೋಪುರ ಸಮರ್ಪಣೆಯೂ ಒಂದಾಗಿದೆ. 32 ಕೋಟಿ ರೂ.ಒಟ್ಟು ವೆಚ್ಚದ ಈ ಯೋಜನೆಯಲ್ಲಿ ಈವರೆಗೆ ಭಕ್ತರಿಂದ 25 ಕೆ.ಜಿ.ಬಂಗಾರ ಹಾಗೂ 11ಕೋಟಿ ರೂ. ನಗದು ಸಂಗ್ರಹವಾಗಿದೆ. ಗರ್ಭಗುಡಿ ಮೇಲ್ಛಾವಣಿಯ 2,500 ಚದರಡಿಗೆ ಬೆಳ್ಳಿಯ ತಗಡಿನ ಮೇಲೆ ಚಿನ್ನದ ತಗಡನ್ನು ಅಳವಡಿಸಲಿದ್ದು, ಇದಕ್ಕಾ 500 ಕೆ.ಜಿ.ಯಷ್ಟು ಬೆಳ್ಳಿಯ ಅಗತ್ಯವೂ ಇದೆ ಎಂದು ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ನುಡಿದರು.
ಚಿನ್ನದ ಗೋಪುರಕ್ಕೆ ಹೆಚ್ಚಿನ ಆಕರ್ಷಣೆ ನೀಡುವ ನಿಟ್ಟಿನಲ್ಲಿ ಕರಾವಳಿ ಸಂಸ್ಕೃತಿ ಎನಿಸಿದ ಹೆಂಚಿನ ಆಕೃತಿಯನ್ನು ರೂಪಿಸಲಾಗುವುದು. ಇದರಿಂದ ಕುಶಲಕರ್ಮಿಗಳ ನೈಪುಣ್ಯದ ಅಭಿವ್ಯಕ್ತಿಯೂ ಸಾಧ್ಯವಾಗಲಿದೆ. ಸುವರ್ಣ ಗೋಪುರದ ತಗಡಿನಲ್ಲಿ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಸರ್ವಮೂಲ ಗ್ರಂಥಗಳನ್ನು ಬರೆಸಲಾಗುವುದು. ಅಲ್ಲದೇ ಮೇಲ್ಚಾವಣಿಯಲ್ಲಿ 21,600 ಹಂಸ ಮಂತ್ರವನ್ನು ದಾಖಲಿಸಲಾಗುವುದು ಎಂದು ಶ್ರೀಪಾದರು ತಿಳಿಸಿದರು.
ಸುವರ್ಣ ಗೋಪುರದ ಕಾಮಗಾರಿಯನ್ನು ಶ್ರೀಕೃಷ್ಣ ಭಕ್ತರಿಗೆ ಕಾಣುವಂತೆ ಶ್ರೀಕೃಷ್ಣಮಠದ ಗೋಶಾಲೆಯ ಮುಂದಿನ ಯಾಗಶಾಲೆ ಸಮೀಪ ನಡೆಸಲಾಗುವುದು. ಬಂಗಾರ ಮತ್ತು ಬೆಳ್ಳಿ ಕೆತ್ತನೆ ಕೆಲಸದಲ್ಲಿ ನಿಷ್ಣಾತರಾದ ದೈವಜ್ಞ ಸಮಾಜ ಹಾಗೂ ಮರದ ಕೆತ್ತನೆ ಕೆಲಸದಲ್ಲಿ ನಿಷ್ಣಾತರಾದ ವಿಶ್ವಕರ್ಮ ಸಮಾಜದ ಕುಲಶಕರ್ಮಿಗಳು ಒಟ್ಟಾಗಿ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಪ್ರಗತಿ ಎಸೋಸಿಯೇಶನ್ನಿನ ಯು. ವೆಂಕಟೇಶ್ ಶೇಟ್ ಯೋಜೆ ಉಸ್ತುವಾರಿ ವಹಿಸಲಿದ್ದಾರೆ ಎಂದರು.
ಸುವರ್ಣ ಗೋಪುರದ ಕೆಲಸಕ್ಕೆ ಒಟ್ಟು 4 ತಿಂಗಳ ಅಗತ್ಯವಿದ್ದು, ಮುಂದಿನ ಮಳೆಗಾಲದ ಒಳಗೆ ಶ್ರೀರಾಮನವಮಿಯ ಶುಭಸಂದರ್ಭದಲ್ಲಿ ಶ್ರೀಕೃಷ್ಣನಿಗೆ ಸುವರ್ಣಗೋಪುರದ ಸಮರ್ಪಣೆ ಮಾಡುವ ಸಂಕಲ್ಪ ಮಾಡಲಾಗಿದೆ ಎಂದು ಪಲಿಮಾರು ಶ್ರೀಗಳು ನುಡಿದರು.
ಎರಡು ವರ್ಷಗಳ ಪರ್ಯಾಯ ಸಂದರ್ಭದಲ್ಲಿ ವಿಶ್ವಕಲ್ಯಾಣಕ್ಕಾಗಿ ಕೈಗೊಂಡ ವಿವಿಧ ಯೋಜನೆಗಳಲ್ಲಿ ಶ್ರೀಕೃಷ್ಣ ದೇವರಿಗೆ ಸುವರ್ಣ ಗೋಪುರ ಸಮರ್ಪಣೆ ಸಂಕಲ್ಪವೂ ಒಂದಾಗಿದ್ದು, ಇದು 32ಕೋಟಿ ರೂ. ವೆಚ್ಚದ ಯೋಜನೆಯಾಗಿದೆ.
-ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು, ಪರ್ಯಾಯ ಪಲಿಮಾರು ಮಠ