ಕಲಬುರ್ಗಿ ಹತ್ಯೆ: ರಾಜ್ಯ ಸರಕಾರಕ್ಕೆ ಸುಪ್ರೀಂ ತರಾಟೆ
‘ನೀವು ಏನನ್ನೂ ಮಾಡಿಲ್ಲ,ಜನರನ್ನು ಮೂರ್ಖರನ್ನಾಗಿಸುತ್ತಿದ್ದೀರಿ ಅಷ್ಟೇ’ ಎಂದ ಪೀಠ

ಹೊಸದಿಲ್ಲಿ,ನ.26: ವಿಚಾರವಾದಿ ಪ್ರೊ.ಎಂ.ಎಂ.ಕಲಬುರ್ಗಿ ಅವರ ಹತ್ಯೆ ಪ್ರಕರಣದ ತನಿಖೆಯಲ್ಲಿ ‘‘ನಿಷ್ಕ್ರಿಯತೆಗಾಗಿ ಮತ್ತು ಕೇವಲ ಜನರನ್ನು ಮೂರ್ಖರನ್ನಾಗಿಸುತ್ತಿರುವುದಕ್ಕಾಗಿ’’ ಕರ್ನಾಟಕ ಸರಕಾರವನ್ನು ಸರ್ವೋಚ್ಚ ನ್ಯಾಯಾಲಯವು ಸೋಮವಾರ ತೀವ್ರ ತರಾಟೆಗೆತ್ತಿಕೊಂಡಿತು.
ಪ್ರಕರಣದಲ್ಲಿ ಈವರೆಗಿನ ತನಿಖೆಯ ಕುರಿತು ಸ್ಥಿತಿಗತಿ ವರದಿಯನ್ನು ಎರಡು ವಾರಗಳಲ್ಲಿ ತನಗೆ ಸಲ್ಲಿಸುವಂತೆ ಕರ್ನಾಟಕ ಸರಕಾರಕ್ಕೆ ನಿರ್ದೇಶ ನೀಡಿದ ನ್ಯಾಯಮೂರ್ತಿಗಳಾದ ಆರ್.ಎಫ್.ನಾರಿಮನ್ ಮತ್ತು ನವೀನ್ ಸಿನ್ಹಾ ಅವರ ಪೀಠವು, ವರದಿಯನ್ನು ಪರಿಶೀಲಿಸಿದ ಬಳಿಕ ತನಿಖೆಯ ಮೇಲೆ ನಿಗಾಯಿರಿಸಲು ತಾನು ಪ್ರಕರಣವನ್ನು ಬಾಂಬೆ ಉಚ್ಚ ನ್ಯಾಯಾಲಯಕ್ಕ್ಕೆ ವರ್ಗಾಯಿಸಬಹುದು ಎಂಬ ಸುಳಿವನ್ನೂ ನೀಡಿತು.
“ಈವರೆಗೆ ನೀವು(ಕರ್ನಾಟಕ ಸರಕಾರ) ಏನು ಮಾಡಿದ್ದೀರಿ?, ಏನೂ ಇಲ್ಲ. ನೀವು ಜನರನ್ನು ಮೂರ್ಖರನ್ನಾಗಿಸುತ್ತಿದ್ದೀರಿ ಅಷ್ಟೇ. ತನಿಖೆಯನ್ನು ಪೂರ್ಣಗೊಳಿಸಲು ನಿಮಗೆ ಇನ್ನೂ ಎಷ್ಟು ಸಮಯ ಬೇಕು?, ಅದನ್ನು ನಮಗೆ ತಿಳಿಸಿ,ಇಲ್ಲದಿದ್ದರೆ ನಾವು ಆದೇಶಗಳನ್ನು ಹೊರಡಿಸುತ್ತೇವೆ ಎಂದು ಪೀಠವು ಹೇಳಿತು.
ತನಿಖೆಯನ್ನು ಪೂರ್ಣಗೊಳಿಸಲು ಅಗತ್ಯ ಕಾಲಾವಧಿಯ ಬಗ್ಗೆ ತಾನು ಸೂಚನೆಗಳನ್ನು ಪಡೆದುಕೊಳ್ಳಬೇಕಾಗುತ್ತದೆ ಎಂದು ಕರ್ನಾಟಕ ಸರಕಾರದ ಪರ ವಕೀಲ ದೇವದತ್ತ ಕಾಮತ್ ತಿಳಿಸಿದಾಗ,ನೀವು ಸೂಚನೆಯನ್ನು ಪಡೆದುಕೊಳ್ಳಿ. ಆಗ ನಾವು ಇಂತಹುದೇ ವಿಷಯವು ಬಾಕಿಯುಳಿದಿರುವ ಬಾಂಬೆ ಉಚ್ಚ ನ್ಯಾಯಾಲಯಕ್ಕೆ ಈ ವಿಷಯವನ್ನೂ ಒಪ್ಪಿಸುತ್ತೇವೆ. ನೀವು ಏನನ್ನೂ ಮಾಡುತ್ತಿಲ್ಲ ಎಂದು ಪೀಠವು ಕಿಡಿಕಾರಿತು.
ಹತ್ಯೆ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ(ಸಿಟ್)ದಿಂದ ತನಿಖೆಯನ್ನು ಕೋರಿ ದಿ.ಕಲಬುರ್ಗಿ ಅವರ ಪತ್ನಿ ಉಮಾದೇವಿ ಕಲಬುರ್ಗಿ ಸಲ್ಲಿಸಿರುವ ಅರ್ಜಿಯ ವಿಚಾರಣೆೆಯನ್ನು ನ್ಯಾಯಾಲಯವು ನಡೆಸುತ್ತಿದೆ.
ಕಲಬುರ್ಗಿ ಪರ ವಕೀಲರು,ಇನ್ನಷ್ಟು ಉಸ್ತುವಾರಿಗಾಗಿ ಪ್ರಕರಣವನ್ನು ಬಾಂಬೆ ಉಚ್ಚ ನ್ಯಾಯಾಲಯಕ್ಕೆ ವರ್ಗಾಯಿಸುವುದು ಒಳ್ಳೆಯದು ಎಂದು ಪೀಠಕ್ಕೆ ತಿಳಿಸಿದರು.
ಕಲಬುರ್ಗಿಯವರ ಹತ್ಯೆಯು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ,ಹೀಗಾಗಿ ರಾಷ್ಟ್ರೀಯ ಮತ್ತು ಅಂತರರಾಜ್ಯ ಭಯೋತ್ಪಾದನೆ ಪ್ರಕರಣಗಳ ತನಿಖೆ ನಡೆಸುವ ವಿಶೇಷ ಏಜೆನ್ಸಿಯಾಗಿರುವ ಎನ್‌ಐಎ ಈ ಪ್ರಕರಣದ ತನಿಖೆಯನ್ನು ನಡೆಸುವಂತಿಲ್ಲ ಎಂದು ಕೇಂದ್ರವು ಕಳೆದ ಮಾ.23ರಂದು ಸರ್ವೋಚ್ಚ ನ್ಯಾಯಾಲಯಕ್ಕ ತಿಳಿಸಿತ್ತು.
ಹಂಪಿ ವಿವಿಯ ಮಾಜಿ ಕುಲಪತಿಯಯಾಗಿದ್ದ 77ರ ಹರೆಯದ ಕಲಬುರ್ಗಿಯವರನ್ನು 2015,ಆ.30ರಂದು ಹಾಡಹಗಲೇ ಧಾರವಾಡದ ಕಲ್ಯಾಣ ನಗರದಲ್ಲಿಯ ಅವರ ನಿವಾಸದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.







