ವಿಜಯಪುರ: ಪತ್ನಿಯ ಅಂತ್ಯ ಸಂಸ್ಕಾರಕ್ಕೆ ಬಂದ ಪತಿಯ ಥಳಿಸಿ ಹತ್ಯೆ

ವಿಜಯಪುರ, ನ. 26: ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದ ಪತ್ನಿಯ ಅಂತ್ಯ ಸಂಸ್ಕಾರಕ್ಕೆ ಆಗಮಿಸಿದ್ದ ಆಕೆಯ ಪತಿಯನ್ನು ಸಂಬಂಧಿಕರು ಕೊಲೆಗೈದ ಘಟನೆ ತಾಲೂಕಿನ ಖಿಲಾರಹಟ್ಟಿಯಲ್ಲಿ ಸೋಮವಾರ ನಡೆಸಿದೆ.
ಕಾಜಲ್ ತಾಂಬೆ(20) ಎಂಬವರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಆಕೆಯ ಪತಿ ರಾಜು ತಾಂಬೆ(23) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.
ನಿನ್ನೆ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದ ಕಾಜಲ್ ಅಂತ್ಯ ಸಂಸ್ಕಾರಕ್ಕಾಗಿ ಪಾರ್ಥಿವ ಶರೀರವನ್ನು ಇಲ್ಲಿನ ಖಿಲಾರಹಟ್ಟಿಗೆ ತರಲಾಗಿತ್ತು. ಅಂತ್ಯ ಸಂಸ್ಕಾರದ ವೇಳೆ ಕಾಜಲ್ ಪೋಷಕರು ಹಾಗೂ ಸಂಬಂಧಿಕರು ಆಕೆಯ ಪತಿ ರಾಜು ಅವರನ್ನು ಥಳಿಸಿ ಕೊಲೆ ಮಾಡಿದ್ದಾರೆ ಎಂದು ಗೊತ್ತಾಗಿದೆ.
ರಾಜು ಹಾಗೂ ಕಾಜಲ್ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದು, ಒಂದು ವರ್ಷದಿಂದ ದಂಪತಿಯ ನಡುವೆ ಕೌಟುಂಬಿಕ ಕಲಹವಿತ್ತು. ಇವರ ಜಗಳದ ಹಿನ್ನೆಲೆಯಲ್ಲಿ ಹಿರಿಯರು ರಾಜಿ ಪಂಚಾಯಿತಿ ನಡೆಸಿ ಇಬ್ಬರನ್ನು ಒಂದು ಮಾಡಿದ್ದರು ಎಂದು ಹೇಳಲಾಗಿದೆ.
ಈ ಮಧ್ಯೆ ನ.25ರ ಸಂಜೆ ಕಾಜಲ್ ತಾಂಬೆ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ರಾಜು, ತನ್ನ ಪತ್ನಿಯನ್ನು ಕೊಲೆ ಮಾಡಿದ್ದಾನೆಂದು ಆರೋಪಿಸಿ ಆಕೆಯ ಪೋಷಕರು ಅಂತ್ಯ ಸಂಸ್ಕಾರದ ವೇಳೆ ಆತನನ್ನು ಕೊಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ರಾಜುವಿನ ಮೇಲೆ ಹಲ್ಲೆ ನಡೆಯುತ್ತಿದ ವೇಳೆ ತಡೆಯಲು ಹೋದ ಆತನ ಸಹೋದರ ಸಂಜಯ್ ಮೇಲೂ ಕಾಜಲ್ ಪೋಷಕರು ಹಲ್ಲೆ ಮಾಡಿದ್ದು, ಇದರಿಂದ ಅವರು ತೀವ್ರವಾಗಿ ಗಾಯಗೊಂಡ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ರಾಜು ಕೊಲೆಯ ಮಧ್ಯೆಯೇ ತರಾತುರಿಯಲ್ಲಿ ಕಾಜಲ್ ಅಂತ್ಯ ಸಂಸ್ಕಾರ ನೆರವೇರಿಸಿದ್ದು, ರಾಜು ಕೊಲೆ ಆರೋಪಿಗಳು ತಲೆ ಮರೆಸಿಕೊಂಡಿದ್ದು, ಅವರ ಬಂಧನಕ್ಕಾಗಿ ಇಲ್ಲಿನ ಬಬಲೇಶ್ವರ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.







