ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಡಿ.2: ಉಡುಪಿಯಲ್ಲಿ ಬೃಹತ್ ಜನಾಗ್ರಹ ಸಭೆ
ಉಡುಪಿ, ನ.26: ಅಯೋಧ್ಯೆಯ ಶ್ರೀರಾಮಜನ್ಮಭೂಮಿಯಲ್ಲಿ ಭವ್ಯವಾದ ಶ್ರೀರಾಮ ಮಂದಿರದ ನಿರ್ಮಾಣಕ್ಕಾಗಿ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲು ಡಿ.2ರ ರವಿವಾರ ಉಡುಪಿಯಲ್ಲಿ ಬೃಹತ್ ಜನಾಗ್ರಹ ಸಭೆಯನ್ನು ಆಯೋಜಿಸಲಾಗಿದೆ ಎಂದು ಬಜರಂಗದಳ ದಕ್ಷಿಣ ಪ್ರಾಂತದ ಪ್ರಾಂತ ಸಂಯೋಜಕ ಸುನೀಲ್ ಕೆ.ಆರ್.ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ಸಮಾಜ 1528ರಿಂದ ರಾಮಮಂದಿರಕ್ಕಾಗಿ ಸತತ ಹೋರಾಟ ನಡೆಸಿಕೊಂಡು ಬಂದಿದೆ. ಪ್ರಸ್ತುತ ರಾಮ ಜನ್ಮಭೂಮಿಯವಿಚಾರಣೆ ಸುಪ್ರೀಂ ಕೋರ್ಟಿನಲ್ಲಿ ನಡೆದಿದ್ದು, ತೀರ್ಪು ವಿಳಂಬವಾಗುತ್ತಿರುವುದರಿಂದ ರಾಮಮಂದಿರ ನಿರ್ಮಾಣ ಪ್ರಕ್ರಿಯೆ ತಡವಾಗುತ್ತಿದೆ ಎಂದರು.
ಹೀಗಾಗಿ ಕೇಂದ್ರ ಸರಕಾರ, ರಾಮಮಂದಿರ ನಿರ್ಮಾಣಕ್ಕೆ ಇರುವ ಎಲ್ಲಾ ಅಡೆತಡೆಗಳನ್ನು ನಿವಾರಿಸಲು ಸಂಸತ್ತಿನಲ್ಲಿ ಮಸೂದೆಯ ಮಂಡಿಸಬೇಕೆಂದು ಆಗ್ರಹಿಸಿ ದೇಶಾದ್ಯಂತ ನಡೆಯುತ್ತಿರುವ ಜನಾಗ್ರಹ ಸಬೆಯನ್ನು ಡಿ.2ರಂದು ಉಡುಪಿಯಲ್ಲೂ ನಡೆಸಲಾಗುತ್ತಿದೆ ಎಂದರು.
ಡಿ.2ರಂದು ಅಪರಾಹ್ನ 3:00ಗಂಟೆಗೆ ಜೋಡುಕಟ್ಟೆಯಿಂದ ಸಿಟಿಬಸ್ ನಿಲ್ದಾಣದ ಮಾರ್ಗವಾಗಿ ಬೃಹತ್ ಮೆರವಣಿಗೆ ನಡೆಯಲಿದ್ದು, ಶ್ರೀಕೃಷ್ಣ ಮಠದ ರಾಜಾಂಗಣ ಹಿಂಭಾಗದ ಪಾರ್ಕಿಂಗ್ ಪ್ರದೇಶದಲ್ಲಿ ಬಹಿರಂಗ ಸಭೆ ನಡೆಯಲಿದೆ ಎಂದು ಸುನೀಲ್ ಕೆ.ಆರ್.ತಿಳಿಸಿದರು. ಸಭೆಯಲ್ಲಿ ಸುಮಾರು 20000 ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಸಭೆಯಲ್ಲಿ ವಿಎಚ್‌ಪಿಯ ಅಖಿಲ ಭಾರತ ಸಹ ಕಾರ್ಯದರ್ಶಿ ರಾಘವಲು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥರು ಉದ್ಘಾಟಿಸುವ ಈ ಕಾರ್ಯಕ್ರಮದಲ್ಲಿ ಸಾಧುಸಂತರು, ಧಾರ್ಮಿಕ ಮುಖಂಡರು ಹಾಗೂ ಜನಪ್ರತಿನಿಧಿಗಳು ಪಾಲ್ಗೊಳ್ಳುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿಎಚ್‌ಪಿಯ ಜಿಲ್ಲಾ ಕಾರ್ಯದರ್ಶಿ ಪ್ರಮೋದ್ ಮಂದಾರ್ತಿ, ಬಜರಂಗ ದಳದ ಜಿಲ್ಲಾ ಸಂಚಾಲಕ ದಿನೇಶ್ ಮೆಂಡನ್, ಜಿಲ್ಲಾ ಸಹಸಂಚಾಲಕ ಸುಧೀರ್ ನಿಟ್ಟೆ ಉಪಸ್ಥಿತರಿದ್ದರು.







