ಬೆಂಗಳೂರು: ಎಟಿಎಂ ದೋಚಲು ವಿಫಲ ಯತ್ನ

ಸಾಂದರ್ಭಿಕ ಚಿತ್ರ
ಬೆಂಗಳೂರು, ನ.26: ದುಷ್ಕರ್ಮಿಯೋರ್ವ ಸಿಸಿ ಕ್ಯಾಮೆರಾಕ್ಕೆ ರಾಸಾಯನಿಕ ಸಿಂಪಡಿಸಿ ಎಟಿಎಂ ಯಂತ್ರ ಮುರಿದು ಹಣ ದೋಚಲು ವಿಫಲ ಯತ್ನ ನಡೆಸಿರುವ ಘಟನೆ ಇಲ್ಲಿನ ರಾಜಾಜಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಡಾ.ರಾಜ್ಕುಮಾರ್ ರಸ್ತೆಯಲ್ಲಿರುವ ಆಂಧ್ರಬ್ಯಾಂಕ್ ರಾಜಾಜಿನಗರ ಶಾಖೆಯಲ್ಲಿನ ಎಟಿಎಂ ಸೆಂಟರ್ನಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಸೋಮವಾರ ಬೆಳಗಿನ ಜಾವ 3:30ರ ಸುಮಾರಿಗೆ ಬ್ಯಾಂಕ್ ಆವರಣ ಪ್ರವೇಶಿಸಿದ ದುಷ್ಕರ್ಮಿ, ತಾನು ತಂದಿದ್ದ ರಾಸಾಯನಿಕ ವಸ್ತುವನ್ನು ಸಿಸಿ ಕ್ಯಾಮೆರಾಕ್ಕೆ ಸಿಂಪಡಿಸಿ ನಂತರ ಗ್ಯಾಸ್ ಕಟರ್ನಿಂದ ಎಟಿಎಂ ಮುರಿದು ಹಣ ದೋಚಲು ಯತ್ನಿಸಿದ್ದಾನೆ ಎನ್ನಲಾಗಿದೆ.
ಎಟಿಎಂ ಮುರಿಯುತ್ತಿದ್ದಂತೆ ಬ್ಯಾಂಕ್ ಭದ್ರತಾ ವ್ಯವಸ್ಥೆ ಅಳವಡಿಸಿದ್ದ ಮುಂಬೈನಲ್ಲಿರುವ ನಿಶಾ ಸೆಕ್ಯೂರಿಟಿ ಸಂಸ್ಥೆಯಲ್ಲಿ ಗಂಟೆ ಸದ್ದು (ಅಲಾರಾಂ) ಬಂದಿದೆ. ತಕ್ಷಣ ಎಚ್ಚೆತ್ತುಕೊಂಡ ಅಲ್ಲಿನ ಸಿಬ್ಬಂದಿ ಕೂಡಲೇ ರಾಜಾಜಿನಗರ ಆಂಧ್ರಬ್ಯಾಂಕ್ ಶಾಖೆಯ ಮುಖ್ಯ ವ್ಯವಸ್ಥಾಪಕರನ್ನು ಹಾಗೂ ಭದ್ರತಾ ಸಿಬ್ಬಂದಿಯನ್ನು ಸಂಪರ್ಕಿಸಿ ಮಾಹಿತಿ ರವಾನಿಸಿದ್ದಾರೆ. ಭದ್ರತಾ ಸಿಬ್ಬಂದಿಯವರು ವಿಷಯ ತಿಳಿಸಿದ ತಕ್ಷಣ ಬ್ಯಾಂಕ್ ಮುಖ್ಯ ವ್ಯವಸ್ಥಾಪಕರಾದ ಸಿರಿಲ್ ಎಂ. ಅವರು ರಾಜಾಜಿನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸುವ ವೇಳೆಗೆ ದುಷ್ಕರ್ಮಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಆತನ ಪತ್ತೆಗೆ ಪೊಲೀಸರು ನಗರದ ಹಲವು ಪ್ರದೇಶಗಳಲ್ಲಿ ನಾಕಾಬಂಧಿ ನಿರ್ಮಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಎಟಿಎಂ ದರೋಡೆ ಮಾಡಲು ಎಷ್ಟು ಮಂದಿ ದುಷ್ಕರ್ಮಿಗಳು ಬಂದಿದ್ದರು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಸಿಸಿ ಕ್ಯಾಮೆರಾದಲ್ಲಿ ಓರ್ವ ಮಾತ್ರ ಕಾಣಿಸುತ್ತಿದ್ದಾನೆ.
ಬ್ಯಾಂಕ್ ಅಳವಡಿಸಲಾಗಿರುವ ಅತ್ಯಾಧುನಿಕ ಅಲಾರಾಂ ವ್ಯವಸ್ಥೆಯಿಂದ ದರೋಡೆ ಯತ್ನ ವಿಫಲವಾಗಿದ್ದು, ಆದಷ್ಟು ಶೀಘ್ರ ಆರೋಪಿಯನ್ನು ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.







