ಸೌಹಾರ್ದತೆಯ ಬ್ರಾಂಡ್ ಮಂಗಳೂರು ನಮ್ಮದಾಗಲಿ : ‘ಬ್ರ್ಯಾಂಡ್ ಮಂಗಳೂರು’ ಸಂವಾದದಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ್

ಮಂಗಳೂರು, ನ.26: ಶಿಕ್ಷಣ, ಆರೋಗ್ಯ, ವಾಣಿಜ್ಯ ಕ್ಷೇತ್ರದಲ್ಲಿ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿರುವ ಮಂಗಳೂರು ಕೋಮು ಸೌಹಾರ್ದತೆಯ ವಿಷಯದಲ್ಲೂ ಬ್ರ್ಯಾಂಡ್ ಆಗಬೇಕಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಕುಮಾರ್ ಅಭಿಪ್ರಾಯಿಸಿದ್ದಾರೆ.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಮುಖ ಯೋಜನೆಯಾಗಿ ನಗರದ ಪೊಲೀಸ್ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಇಂದು ‘ಬ್ರ್ಯಾಂಡ್ ಮಂಗಳೂರು’ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಸ್ವಚ್ಛ ಮಂಗಳೂರಿನ ಪರಿಕಲ್ಪನೆಯಂತೆ ಸ್ವಚ್ಚ ಮನಸ್ಸುಗಳನ್ನು ಕಟ್ಟುವ ಕೆಲಸ ಆಗಬೇಕಾಗಿದೆ. ಪ್ರಾಕೃತಿಕ ವಿಕೋಪ ಹಾಗೂ ಮನಸ್ಸುಗಳ ವಿಕೋಪ ಎರಡರಲ್ಲೂ ಪಾಠವಿದ್ದು, ಅದನ್ನು ನಾವು ಕಲಿಯಬೇಕಾಗಿದೆ. ಶಾಂತಿ ಸಭೆಗಳನ್ನು ನಡೆಸುವುದಕ್ಕಿಂತಲೂ ಮುಖ್ಯವಾಗಿ ಪ್ರೀತಿ ವಿಶ್ವಾಸವನ್ನು ಮೂಡಿಸುವ ಮತೀಯ ಸಾಮರಸ್ಯದ ಕ್ಲಬ್‌ಗಳನ್ನು ವಾರ್ಡ್, ಗ್ರಾಮ ಮಟ್ಟದಲ್ಲಿ ನಡೆಸಬೇಕಾಗಿದೆ ಎಂದು ಅವರು ಹೇಳಿದರು.
ನಮ್ಮ ಸುತ್ತಮುತ್ತ ಬೃಹತ್ ಕಟ್ಟಡಗಳು ನಿರ್ಮಾಣವಾಗುತ್ತಿರುವಂತೆಯೇ, ಸ್ಫೋಟಿಸುವ ಮನಸ್ಸೂ ನಮ್ಮ ನಡುವೆ ಇದೆ. ಆ ಮನಸ್ಸುಗಳಲ್ಲಿ ಪ್ರೀತಿ ವಿಶ್ವಾಸವನ್ನು ತುಂಬುವ ಮೂಲಕ ಸಾಮರಸ್ಯದ ಬದುಕನ್ನು ನಮ್ಮದಾಗಿಸಿ, ಅಭಿವೃದ್ಧಿಗೆ ಒತ್ತು ನೀಡಬೇಕಾಗಿದೆ. ಧಾರ್ಮಿಕ ಕಾರ್ಯಕ್ರಮ, ಸಮಾರಂಭಗಳಲ್ಲಿ ಪರಸ್ಪರರು ಭಾಗಿಯಾಗುವ ಮೂಲಕ ಪರಸ್ಪರ ಧರ್ಮಗಳ ಕುರಿತು ಅರಿಯಬೇಕಾಗಿದೆ. ಕಾಲೇಜು ಶಾಲೆಗಳಲ್ಲಿ ಯುವ ಮನಸ್ಸುಗಳಲ್ಲಿ ಕೋಮು ಸೌಹಾರ್ದತೆಯ ಬೀಜವನ್ನು ಬಿತ್ತಬೇಕು ಎಂದು ಅಪರ ಜಿಲ್ಲಾಧಿಕಾರಿ ಕುಮಾರ್ ಸಲಹೆ ನೀಡಿದರು.
ಸಭೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳಾದ ಏಕಗಮ್ಯಾನಂದ ಸ್ವಾಮೀಜಿ, ಕರ್ನಲ್ ಶರತ್ ಭಂಡಾರಿ, ಡಾ. ಅಣ್ಣಯ್ಯ ಕುಲಾಲ್, ಪಿ.ಬಿ. ಅಬ್ದುಲ್ ಹಮೀದ್, ಹನುಮಂತ ಕಾಮತ್, ಪುಷ್ಪರಾಜ್ ಜೈನ್, ಪ್ರದೀಪ್ ಕುಮಾರ್ ಕಲ್ಕೂರ, ಎಂ.ಆರ್. ವಾಸುದೇವ, ಫಾ. ವಿಕ್ಟರ್ ಲೋಬೋ, ಎಂ.ಆರ್. ಬಳ್ಳಾಲ್, ಇಬ್ರಾಹೀಂ ಕೋಡಿಜಾಲ್, ಮುಹಮ್ಮದ್ ಇರ್ಫಾನ್, ಡಾ. ಶಿವಶರಣ್, ಸುದೇಶ್, ಕಿರಣ್ ಪ್ರಸಾದ್, ಗೌರವ್ ಹೆಗ್ಡೆ, ಸ್ವರ್ಣ ಸುಂದರ್, ಯತೀಶ್ ಬೈಕಂಪಾಡಿ, ಕಮಾಂಡರ್ ಎಂ.ಎಂ. ನಾಯಕ್ ಮೊದಲಾದವರು ತಮ್ಮ ಅಭಿಪ್ರಾಯ, ಸಲಹೆಗಳನ್ನು ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಡಿಸಿಪಿಗಳಾದ ಹನುಮಂತರಾಯ, ಉಮಾ ಪ್ರಶಾಂತ್ ಉಪಸ್ಥಿತರಿದ್ದರು.
ಮಂಗಳೂರು ನಗರ ಪೊಲೀಸ್ ಆಯುಕತಿರಾದ ಟಿ.ಆರ್.ಸುರೇಶ್, ದ.ಕ.ಜಿಲ್ಲಾ ಪೊಲೀಸ್ ಅಧೀಕ್ಷರಾದ ಡಾ.ಬಿ.ಆರ್ ರವಿಕಾಂತೇ ಗೌಡ ಭಾಗವಹಿಸಿದ್ದರು.
ಪತ್ರಕರ್ತ ಆರ್.ಸಿ. ಭಟ್ ಸ್ವಾಗತಿಸಿದರು. , ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಿವಾಸ್ ನಾಯಕ್ ಇಂದಾಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುಷ್ಪರಾಜ್ ಬಿ.ಎನ್. ಕಾರ್ಯಕ್ರಮ ನಿರೂಪಿಸಿದರು. ಹರೀಶ್ ಮಾಂಬಾಡಿ ವಂದಿಸಿದರು.
ಸಭೆಯಲ್ಲಿ ವ್ಯಕ್ತವಾದ ಪ್ರಮುಖ ಸಲಹೆಗಳು
ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳಿಂದ ಅಭಿವೃದ್ಧಿ, ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿ ಸಾಕಷ್ಟು ಸಲಹೆ, ಅಭಿಪ್ರಾಯಗಳು ವ್ಯಕ್ತವಾಯಿತು. ಅದಲ್ಲದೆ ಕೋಮು ಸೌಹಾರ್ದಕ್ಕೆ ಸಂಬಂಧಿಸಿ ಕೆಲವೊಂದು ಪ್ರಮುಖ ಸಲಹೆಗಳು ಕೂಡಾ ವ್ಯಕ್ತವಾಯಿತು.
►ಜಿಲ್ಲಾಡಳಿತ ಜನರನ್ನು ವಿಶ್ವಾಸಕ್ಕೆ ಪಡೆದು ಜನಸಂಪರ್ಕ ಸಭೆ ನಡೆಸಬೇಕು.
►ಮಾಧ್ಯಮಗಳಲ್ಲಿ ಋಣಾತ್ಮಕ ಸುದ್ದಿಗಳ ವೈಭವೀಕರಣ ನಿಲ್ಲಬೇಕು.
►ಸಾಮಾಜಿಕ ಜಾಲತಾಣಗಳಿಗೆ ಕಡಿವಾಣ ಅಗತ್ಯ.
►ಎಲ್ಲರೂ ಒಳಗೊಳ್ಳುವ, ಒಟ್ಟಾಗಿ ಸೇರುವ ಕಾರ್ಯಕ್ರಮಗಳನ್ನು ನಡೆಸಬೇಕು.
►ಧರ್ಮಗಳ ಬಗ್ಗೆ ಪರಸ್ಪರರು ತಿಳಿದುಕೊಳ್ಳುವ ಕಾರ್ಯಕ್ರಮಗಳು ನಡೆಯಬೇಕು.
►ರಾತ್ರಿ ವೇಳೆ ಓಡಾಟಕ್ಕೂ ಮಂಗಳೂರು ಸುರಕ್ಷಿತವಾಗಬೇಕು.
ಹೊರ ಜಿಲ್ಲೆಗಿಂತ ದ.ಕ.ಜಿಲ್ಲೆಯಲ್ಲಿ ಅಪರಾಧ ಸಂಖ್ಯೆ ಕಡಿಮೆ: ಟಿ.ಆರ್. ಸುರೇಶ್
ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಪರಾಧ ಸಂಖ್ಯೆ ಕಡಿಮೆ. ಹಾಗಿದ್ದರೂ ಕೆಲವೊಂದು ಸಣ್ಣ ಪುಟ್ಟ ಗಲಭೆ, ಘಟನೆಗಳನ್ನು ವಿನಾ ಕಾರಣ ವೈಭವೀಕರಿಸುತ್ತಿರುವುದರಿಂದ ಮಾತ್ರವೇ ದಕ್ಷಿಣ ಕನ್ನಡ ಅಥವಾ ಮಂಗಳೂರಿನ ಬಗ್ಗೆ ಹೊರಗಡೆ ಋಣಾತ್ಮಕವಾಗಿ ಗುರುತಿಸುವಂತಾಗಿದೆ ಎಂದು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಅಭಿಪ್ರಾಯಿಸಿದರು.
ಸಣ್ಣ ಪುಟ್ಟ ಗಲಭೆಗಳಿಗೂ ಕೋಮು ಬಣ್ಣ ಹಚ್ಚಿ ವೈಭವೀಕರಿಸುವ ಕೆಲಸ ಜಿಲ್ಲೆಯಲ್ಲಿ ಆಗುತ್ತಿದ್ದು, ಅದಕ್ಕೆ ಹೆಚ್ಚಿನ ಪ್ರಚಾರವೂ ದೊರೆಯುತ್ತದೆ. ನಕಾರಾತ್ಮಕ ವಿಷಯಗಳಿಗೆ ಆದ್ಯತೆ ನೀಡದೆ ಇಲ್ಲಿನ ಕೋಮು ಸೌಹಾರ್ದತೆಯನ್ನು ಎತ್ತಿ ಹಿಡಿಯೇಕಾಗಿದೆ ಎಂದು ಅವರು ಹೇಳಿದರು.
ಸೌಹಾರ್ದ ಬ್ರ್ಯಾಂಡ್ ಮಂಗಳೂರು ಅಗತ್ಯ
ಮಂಗಳೂರನ್ನು ನಕಾರಾತ್ಮಕವಾಗಿ ಬಿಂಬಿಸಲು ಕಾರಣವಾದ ಕೇವಲ ಶೇ. 2ರಷ್ಟಿರುವ ಕೆಟ್ಟ ಮನಸ್ಸುಗಳನ್ನು ಸ್ವಚ್ಛಗೊಳಿಸುವ ಮೂಲಕ ಸೌಹಾರ್ದ ಬ್ರ್ಯಾಂಡ್ ಮಂಗಳೂರು ನಿರ್ಮಾಣ ನಮ್ಮ ಅಗತ್ಯವಾಗಬೇಕಾಗಿದೆ ಎಂದು ಇನ್ನೋರ್ವ ಮುಖ್ಯ ಅತಿಥಿ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಮುಹಮ್ಮದ್ ನಝೀರ್ ಹೇಳಿದರು.