ಊರಿನ ಮೂಲಮನೆ, ಕೃಷಿ ರಕ್ಷಣೆ ಮೊದಲಾಗಲಿ : ಡಾ.ರಾವ್

ಬ್ರಹ್ಮಾವರ, ನ.26: ಪರ ಊರುಗಳಿಗೆ ಹೋಗಿ ಉತ್ತಮ ಬದುಕು ರೂಪಿಸಿಕೊಂಡವರು ಊರಿಗೆ ಬಂದಾಗ ಊರ ದೇವರ ಸೇವೆಗಿಂತ ಊರಲ್ಲಿರುವ ತಮ್ಮ ತಮ್ಮ ಮೂಲಮನೆ ಮತ್ತು ಕೃಷಿಯನ್ನೇ ನಂಬಿ ಅದರಲ್ಲಿ ವಾಸವಿರುವ ಕೃಷಿಕ ಬಂಧುಗಳನ್ನು ರಕ್ಷಿಸುವ ಕಾರ್ಯ ಮೊದಲು ಮಾಡಬೇಕಾಗಿದೆ ಎಂದು ಖ್ಯಾತ ವೈದ್ಯ ಹಾಗೂ ಆರೂರು ಶ್ರೀವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ರಾಘವೇಂದ್ರ ರಾವ್ ಹೇಳಿದ್ದಾರೆ.
ಉಡುಪಿ ಜಿಲ್ಲಾ ಕೃಷಿಕ ಸಂಘದ ಬ್ರಹ್ಮಾವರ ವಲಯ ಸಮಿತಿ, ಆರೂರು ವಿಷ್ಣುಮೂರ್ತಿ ದೇವಸ್ಥಾನದ ಬಯಲು ರಂಗಮಂದಿರದಲ್ಲಿ ಆಯೋಜಿಸಿದ ಕೃಷಿ ಮಾಹಿತಿ ಮತ್ತು ಕೃಷಿಕ ಸಂಘದ ಆರೂರು ಗ್ರಾಮ ಸಮಿತಿ ರಚನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಹೀಗೆ ಮಾಡುವುದರಿಂದ ಊರಲ್ಲಿ ತನ್ನಿಂದ ತಾನೇ ಕೃಷಿ, ಊರು, ಧಾರ್ಮಿಕತೆ ಸಂಬಂಧಗಳು ಉದ್ಧಾರವಾಗುತ್ತವೆ. ಇ್ಲವಾದರೆ ಎಲ್ಲಾ ಸಂಬಂಧ ಗಳು ಒಂದೊಂದೇ ಕಳಚಿಕೊಳ್ಳುತ್ತಾ ಊರಿಗೆ ಊರೇ ಪಾಳುಕೊಂಪೆಯಂತೆ ಆಗತೊಡಗುತ್ತವೆ ಎಂದವರು ಹೇಳಿದರು.
ಜಿಲ್ಲಾ ಕೃಷಿಕ ಸಂಘದ ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್ ಕಡಿಮೆ ವೆಚ್ಚದಲ್ಲಿ ವೈಜ್ಞಾನಿಕ - ಲಾಭದಾಯಕವಾಗಿ ಮೆಣಸು, ಬಾಳೆ ಮತ್ತು ಭತ್ತ ಬೆಳೆ ಕೃಷಿ ಕುರಿತು ಮಾಹಿತಿ ನೀಡಿದರು. ಕೃಷಿಕ ಸಂಘ ಚೇರ್ಕಾಡಿ ಗ್ರಾಮ ಸಮಿತಿಯ ಸುಕುಮಾರ್ ಶೆಟ್ಟಿ, ಕಸ್ತೂರಿ ಪ್ರಭು, ಪೆರಂಪಳ್ಳಿ ವಲಯ ಸಮಿತಿಯ ಸುಬ್ರಹ್ಮಣ್ಯ ಶ್ರೀಯಾನ್, ಕೃಷಿಕ ಸಂಘದ ಜಿಲ್ಲಾ ಪದಾಧಿಕಾರಿಗಳಾದ ರಾಮಕೃಷ್ಣ ಶರ್ಮ ಬಂಟಕಲ್ಲು, ರವೀಂದ್ರ ಗುಜ್ಜರಬೆಟ್ಟು, ಆರೂರು ಗ್ರಾಪಂ ಅಧ್ಯಕ್ಷ ರಾಜು ಕುಲಾಲ್, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಭಾಗವಹಿಸಿದ್ದರು.
ಕೃಷಿಕ ಸಂಘದ ಆರೂರು ಗ್ರಾಮ ಸಮಿತಿಯ ಪದಾಧಿಕಾರಿಗಳನ್ನಾಗಿ ಮಲ್ಲಿಕಾ ಎಸ್. ಶೆಟ್ಟಿ ಆರೂರು ಕುರುಡುಂಜೆ, ಅಜಯ್ ರಾವ್ ವಿ.ಕೆ. ಅಡ್ಜೀಲು, ಅಶೋಕ್ ನಾಯ್ಕ ಮೇಲಡ್ಪು, ಮೋಹನ್ ನಾಯ್ಕಿ ರಂಜೆಬೈಲು, ಈಶ್ವರ ಶೇರಿಗಾರ್ ದೇವಸ್ಥಾನಬೆಟ್ಟು, ಪ್ರಜ್ವಲ್ ಶೆಟ್ಟಿ ಬೆಳ್ಮಾರು ಇವರುಗಳನ್ನು ಆಯ್ಕೆ ಮಾಡಲಾಯಿತು.
ಉದಯ ಆಚಾರ್ಯ ಸ್ವಾಗತಿಸಿದರೆ, ಶ್ರೀನಿವಾಸ ಬಲ್ಲಾಳ್ ಮಲ್ಲಂಪಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಭೋಜ ಶೆಟ್ಟಿ ಮುಂಡ್ಕಿನಜಡ್ಡು ವರದಿ ವಾಚಿಸಿದರು. ಬ್ರಹ್ಮಾವರ ವಲಯ ಸಮಿತಿಯ ಪ್ರಭಾಕರ ವಿ.ಶೆಟ್ಟಿ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿ ವಂದಿಸಿದರು. ಮಮತಾ ಎಸ್.ಶೆಟ್ಟಿ ಆಲುಂಜೆ ಕಾರ್ಯಕ್ರಮ ನಿರೂಪಿಸಿದರು.