ಮಣಿಪಾಲ: ಮಳೆ ನೀರು ಕೊಯ್ಲು-ಮಾಹಿತಿ ಕಾರ್ಯಗಾರ

ಮಣಿಪಾಲ, ನ.26: ಇತ್ತೀಚಿನ ದಿನಗಳಲ್ಲಿ ಮನೆಯಂಗಳದಲ್ಲಿ ನೀರು ಇಂಗುವಿಕೆಗೆ ಅವಕಾಶಗಳಿಲ್ಲ. ಮನೆಯ ಎದುರು ಅಂಗಳ, ಹಿತ್ತಲಿಗೆ ಕಾಂಕ್ರಿಟ್, ಇಂಟರ್‌ಲಾಕ್ ಅಳವಡಿಸಿರುವುದರಿಂದ ಸಹಜವಾಗಿ ನೀರು ಇಂಗುವಿಕೆ ಸಾಧ್ಯವಾಗುತ್ತಿಲ್ಲ. ನೀರಿನ ಕೊರತೆ ಇಂದಿನ ಜ್ವಲಂತ ಸಮಸ್ಯೆಯಾಗಿದ್ದು, ನೀರು ನಿರ್ವಹಣೆ, ನೀರಿನ ಸದ್ಬಳಕೆ ಇತ್ಯಾದಿಗಳ ಬಗ್ಗೆ ಸಾರ್ವಜನಿಕರಿಗೆ, ಶಾಲಾ ಮಕ್ಕಳಿಗೆ ಅರಿವು ಮೂಡಿಸಿದರೆ ಭವಿಷ್ಯದಲ್ಲಿ ನೀರಿನ ಸಮಸ್ಯೆಗೆ ಪರಿಹಾರ ನಮ್ಮಲ್ಲೇ ಕಂಡುಕೊಳ್ಳಲು ಸಾಧ್ಯ ಎಂದು ಉಡುಪಿ ಜಿ.ಪಂ. ಉಪಕಾರ್ಯದರ್ಶಿ ಶ್ರೀನಿವಾಸ ರಾವ್ ಹೇಳಿದ್ದಾರೆ.
ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟಿನಲ್ಲಿ ನಡೆದ ಒಂದು ದಿನದ ಮಳೆ ನೀರು ಕೊಯ್ಲು ಕಾರ್ಯಗಾರವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಈ ವರ್ಷ ಮಳೆಯ ವೈಪರೀತ್ಯದಿಂದ ಟ್ಯಾಂಕರ್ ಮೂಲಕ ನೀರು ಸರಬ ರಾಜು ಮಾಡುವ ಪರಿಸ್ಥಿತಿ ಎದುರಾಗಬಹುದು ಎಂಬ ಆತಂಕ ಮೂಡಿದೆ. ಈ ಬಗ್ಗೆ ಪ್ರತಿಯೊಬ್ಬ ನಾಗರಿಕನೂ ಚಿಂತನೆ ನಡೆಸಬೇಕಾಗಿದೆ ಎಂದರು. ಪಂಚಾಯತಿಯವರು ನೀರನ್ನು ಗ್ರಾಮಗಳಿಗೆ ಸರಬರಾಜು ಮಾಡುತ್ತಿದ್ದು, ಮಳೆ ನೀರನ್ನು ಹಿಡಿದಿಟ್ಟು ಅದನ್ನು ಯಾವ ರೀತಿಯಲ್ಲಿ ಉಪಯೋಗಿಸಬಹುದು ಎಂಬ ಬಗ್ಗೆ ಮಾಹಿತಿಯನ್ನು ನೀಡಬೇಕು ಎಂದವರು ಸಲಹೆ ನೀಡಿದರು.
ಬಾರಕೂರು ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಬಿ. ಸೀತಾರಾಮ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಮಳೆ ನೀರು ಸಂಗ್ರಹದ ಬಗ್ಗೆ ಆಸಕ್ತಿ ವಹಿಸಿದರೆ ಮುಂದಿನ ದಿನಗಳಲ್ಲಿ ಜಲ ಕ್ಷಾಮ ನಿವಾರಣೆಯಾಗ ಬಹುದು ಎಂದರು.
ವೇದಿಕೆಯಲ್ಲಿ ಐ.ಜಿ.ಕಿಣಿ, ಅನಂತ ಪ್ರಭು ಉಪಸ್ಥಿತರಿದ್ದರು. ನಾರಾಯಣ ಶೆಣೈ, ಬಿ.ಸೀತಾರಾಮ್ ಶೆಟ್ಟಿ, ಜಿ.ಎಂ.ರೆಬೆಲ್ಲೋ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಬಿವಿಟಿಯ ಕಾರ್ಯಕ್ರಮ ಸಂಯೋಜಕಿ ಲಕ್ಷ್ಮೀಬಾಯಿ ಸ್ವಾಗತಿಸಿದರೆ, ಆಡಳಿತಾಧಿಕಾರಿ ಐ.ಜಿ.ಕಿಣಿ ವಂದಿಸಿದರು.
ಈ ಕಾರ್ಯಗಾರದಲ್ಲಿ ಗ್ರಾಮ ಪಂಚಾಯತಿನ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಾರ್ವಜನಿಕರು ಸೇರಿ ಸುಮಾರು 70 ಪ್ರತಿನಿಧಿಗಳು ಭಾಗವಹಿಸಿದ್ದರು.