ಮಂಡ್ಯ: ತವರಿನ ಪುತ್ರ ಅಂಬಿಗೆ ಲಕ್ಷಾಂತರ ಜನರ ಅಂತಿಮ ನಮನ

ಮಂಡ್ಯ, ನ.26: ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅಗಲಿದ ಹಿರಿಯ ಚಿತ್ರನಟ ಹಾಗೂ ಮಾಜಿ ಸಚಿವ ಅಂಬರೀಷ್ ಅವರಿಗೆ ಅಂತಿಮ ನಮನ ಸಲ್ಲಿಸಿದ ಜಿಲ್ಲೆಯ ಲಕ್ಷಾಂತರ ಜನ ಭಾರವಾದ ಹೃದಯದಿಂದ ಸೋಮವಾರ ಪಾರ್ಥೀವ ಶರೀರವನ್ನು ಬೀಳ್ಕೊಟ್ಟರು.
ಜಿಲ್ಲೆಯ ಜನರ ಒತ್ತಾಯದ ಹಿನ್ನೆಲೆಯಲ್ಲಿ ರವಿವಾರ ಸಂಜೆ 5 ಗಂಟೆಗೆ ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣಕ್ಕೆ ಭಾರತೀಯ ಸೇನೆಯ ವಿಶೇಷ ಹೆಲಿಕಾಫ್ಟರ್ ನಲ್ಲಿ ಬೆಂಗಳೂರಿನಿಂದ ತರಲಾದ ಅಂಬರೀಷ್ ಪಾರ್ಥೀವ ಶರೀರವನ್ನು ಸೋಮವಾರ ಬೆಳಗ್ಗೆ 9.30ರವರೆಗೂ ದರ್ಶನಕ್ಕೆ ಇಡಲಾಗಿತ್ತು.
ಸಾಗರೋಪಾಯದಲ್ಲಿ ಕ್ರೀಡಾಂಣಕ್ಕೆ ಆಗಮಿಸುತ್ತಿದ್ದ ಜನರು ಅಗಲಿದ ಮಂಡ್ಯದ ಮಗನ ಪಾರ್ಥೀವ ಶರೀರಕ್ಕೆ ಶ್ರದ್ಧಾಂಜಲಿ ಸಲ್ಲಿಸಿ ಅಂತಿಮ ನಮನ ಸಲ್ಲಿಸಿದರು. ರವಿವಾರ ಪೂರ್ಣ ರಾತ್ರಿವರೆಗೂ ಜನರು ಆಗಮಿಸುತ್ತಿದ್ದರು. ಸೋಮವಾರ ಬೆಳಗ್ಗೆ ಹೆಚ್ಚು ಜನರು ಆಗಮಿಸುತ್ತಿದ್ದ ಕಾರಣ, 8.30ವರೆಗೆ ನಿಗದಿಯಾಗಿದ್ದ ಸಮಯವನ್ನು 9.30ರವರೆಗೆ ವಿಸ್ತರಿಸಲಾಯಿತು.
ಇಡೀ ದಿನ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಸ್ಥಳದಲ್ಲೇ ಹಾಜರಿದ್ದು, ಸಾರ್ವಜನಿಕರು ಪಾರ್ಥೀವ ಶರೀರಕ್ಕೆ ನಮನ ಸಲ್ಲಿಸುವ ಕಾರ್ಯಕ್ರಮದ ಉಸ್ತುವಾರಿಯನ್ನು ನಿಭಾಯಿಸಿದರು. ಯಾವುದೇ ಲೋಪವಿಲ್ಲದಂತೆ ಜಿಲ್ಲಾಡಳಿತ ತನ್ನ ಕೆಲಸವನ್ನು ಜವಾಬ್ಧಾರಿಯಿಂದ ನಿರ್ವಹಣೆ ಮಾಡಿತು.
ಬೆಳಗ್ಗೆ 9.30ರ ಸುಮಾರಿಗೆ ಬೆಂಗಳೂರಿನಿಂದ ಹೆಲಿಕಾಫ್ಟರ್ ಬರುತ್ತಿದ್ದಂತೆ ನೆರೆದಿದ್ದ ಲಕ್ಷಾಂತರ ಅಭಿಮಾನಿಗಳ ರೋಧನ ಮುಗಿಲು ಮುಟ್ಟಿತು. ಪತ್ನಿ ಸುಮಲತಾ, ಪುತ್ರ ಅಭಿಷೇಕ್‍ಗೌಡ ಕಣ್ಣೀರು ಹಾಕುತ್ತಾ ಪಾರ್ಥೀವ ಶರೀರದ ಪೆಟ್ಟೆಗೆ ಜತೆಗೆ ಹೆಲಿಕಾಫ್ಟರ್ ಕಡೆಗೆ ಸಾಗುತ್ತಿದ್ದ ದೃಶ್ಯ ಎಲ್ಲರ ಮನವನ್ನು ಕಲಕುವಂತಿತ್ತು.
ಹಣೆಗೆ ಮಣ್ಣಿನ ತಿಲಕ:
ಹೆಲಿಕಾಫ್ಟರ್ ಸಮೀಪ ಪಾರ್ಥೀವ ಶರೀರವನ್ನು ಇಳಿಸಿದ ಬೆನ್ನಲ್ಲೇ ಸುಮಲತಾ, ಅಭಿಷೇಕ್‍ಗೌಡ ಮಂಡ್ಯದ ಮಣ್ಣಿನ ತಿಲಕವನ್ನು ಅಂಬರೀಷ್ ಅವರ ಹಚ್ಚೋ ಮೂಲಕ ಮಣ್ಣಿಗೆ ಋಣಿಯಾದರು. ನಂತರ, ನೆರೆದಿದ್ದ ಜನರಿಗೆ ಕೈಮುಗಿದು ಕೃತಜ್ಞತೆ ಸಲ್ಲಿಸಿ ಪಾರ್ಥೀವ ಶರೀರದ ಜತೆ ಹೆಲಿಕಾಫ್ಟರ್ ಏರಿದರು. ಹೆಲಿಕಾಫ್ಟರ್ ಬೆಂಗಳೂರು ಕಡೆಗೆ ತೆರಳುತ್ತಿದ್ದಂತೆ ಅಭಿಮಾನಿಗಳು ಭಾರವಾದ ಹೃದಯದಿಂದ ಬೀಳ್ಕೊಟ್ಟರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು, ಸಚಿವರಾದ ಸಾ.ರಾ.ಮಹೇಶ್, ಪುಟ್ಟರಂಗಶೆಟ್ಟಿ, ಸಂಸದ ಎಲ್.ಆರ್.ಶಿವರಾಮೇಗೌಡ, ಬೇಬಿ ಮಠದ ತ್ರಿನೇತ್ರ ಮಹಾಂತ ಸ್ವಾಮೀಜಿ, ಜಿಲ್ಲೆಯ ಶಾಸಕರು, ಹಲವು ಗಣ್ಯರು ಹಾಗೂ ಚಿತ್ರರಂಗದ ಕಲಾವಿದರು ಹಾಜರಿದ್ದರು.







