ರಾಜಕೀಯದ ಮೇರು ವ್ಯಕ್ತಿತ್ವ ಕಣ್ಮರೆ: ಗುಲಾಂ ನಬಿ ಆಝಾದ್
ಜಾಫರ್ ಶರೀಫ್ ನಿಧನ

ಬೆಂಗಳೂರು, ನ.26: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಶರೀಫ್ ಅವರ ನಿಧನದಿಂದ ರಾಜಕೀಯ ಕ್ಷೇತ್ರದ ಮೇರು ವ್ಯಕ್ತಿತ್ವವನ್ನು ನಾವು ಕಳೆದುಕೊಂಡಿದ್ದೇವೆ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಝಾದ್ ತಿಳಿಸಿದರು.
ಸೋಮವಾರ ನಗರದ ಖುದ್ದೂಸ್ ಸಾಹೇಬ್ ಈದ್ಗಾ ಮೈದಾನದಲ್ಲಿ ಜಾಫರ್ ಶರೀಫ್ ಅವರಿಗೆ ಅಂತಿಮ ನಮನ ಸಲ್ಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ನನ್ನ ಹಾಗೂ ಜಾಫರ್ ಶರೀಫ್ ಅವರದ್ದು ಸುಮಾರು 40 ವರ್ಷಗಳ ಸ್ನೇಹ. ಪಕ್ಷ ಹಾಗೂ ದೇಶದ ಹಲವಾರು ವಿಷಯಗಳ ಕುರಿತು ನಾವು ಒಟ್ಟಿಗೆ ಚರ್ಚೆಗಳನ್ನು ನಡೆಸಿದ್ದೇವೆ ಎಂದು ಅವರು ತಿಳಿಸಿದರು.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಆಪ್ತ ವಲಯದಲ್ಲಿ ಜಾಫರ್ ಶರೀಫ್ ಗುರುತಿಸಿಕೊಂಡಿದ್ದರು. ತಮ್ಮ ಕೊನೆಯ ಉಸಿರಿನವರೆಗೆ ಕಟ್ಟಾ ಕಾಂಗ್ರೆಸ್ ಅನುಯಾಯಿಯಾಗಿದ್ದರು ಎಂದು ಅವರು ಹೇಳಿದರು.
ಕೇಂದ್ರದಲ್ಲಿ ರೈಲ್ವೆ, ನೀರಾವರಿ ಹಾಗೂ ಕಲ್ಲಿದ್ದಲು ಸಚಿವರಾಗಿ ಅವರು ಸಲ್ಲಿಸಿರುವ ಸೇವೆ ಅವಿಸ್ಮರಣೀಯ. ದೇಶದಲ್ಲಿ ಕಾಂಗ್ರೆಸ್ ಪಕ್ಷದ ಬಲವರ್ಧನೆಗೂ ಜಾಫರ್ ಶರೀಫ್ ಶ್ರಮಿಸಿದ್ದರು ಎಂದು ಗುಲಾಂ ನಬಿ ಆಝಾದ್ ಹೇಳಿದರು.





