ಮುಂಬೈ ದಾಳಿ ನಡೆಸಿದವರ ಮಾಹಿತಿ ನೀಡಿದವರಿಗೆ 35 ಕೋಟಿ ರೂ.: ಅಮೆರಿಕದಿಂದ ಬಹುಮಾನ ಘೋಷಣೆ

ವಾಶಿಂಗ್ಟನ್, ನ. 26: 2008ರ ಮುಂಬೈ ಭಯೋತ್ಪಾದಕ ದಾಳಿಗೆ ಪಿತೂರಿ ಹೂಡಿದ, ನೆರವು ನೀಡಿದ, ಪ್ರಚೋದನೆ ನೀಡಿದ ಅಥವಾ ನಡೆಸಿದ ಯಾವುದೇ ವ್ಯಕ್ತಿಗಳ ಬಂಧನಕ್ಕೆ ಸಹಾಯಕವಾಗುವ ಮಾಹಿತಿ ನೀಡಿದವರಿಗೆ 5 ಮಿಲಿಯ ಡಾಲರ್ (ಸುಮಾರು 35 ಕೋಟಿ ರೂಪಾಯಿ) ಬಹುಮಾನ ನೀಡಲಾಗುವುದು ಎಂದು ಅಮೆರಿಕ ಸೋಮವಾರ ಘೋಷಿಸಿದೆ.
166 ಜನರ ಸಾವಿಗೆ ಕಾರಣವಾದ ಭೀಕರ ಭಯೋತ್ಪಾದಕ ದಾಳಿಯ 10ನೇ ವಾರ್ಷಿಕ ದಿನದ ಸಂದರ್ಭದಲ್ಲಿ ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತ ಬಹುಮಾನ ಘೋಷಣೆ ಮಾಡಿದೆ.
ಮೃತರಲ್ಲಿ ಆರು ಮಂದಿ ಅಮೆರಿಕದ ಪ್ರಜೆಗಳಾಗಿದ್ದರು ಎಂಬುದನ್ನು ಸ್ಮರಿಸಬಹುದಾಗಿದೆ.
2008 ನವೆಂಬರ್ 26ರಿಂದ 29ರವರೆಗೆ 4 ದಿನಗಳ ಕಾಲ ಪಾಕಿಸ್ತಾನದ ಲಷ್ಕರೆ ತಯ್ಯಿಬ ಭಯೋತ್ಪಾದಕ ಸಂಘಟನೆಯ 10 ಭಯೋತ್ಪಾದಕರು ದೇಶದ ಆರ್ಥಿಕ ರಾಜಧಾನಿಯಲ್ಲಿ ರಕ್ತದ ಕೋಡಿ ಹರಿಸಿದ್ದರು.
ಅಮೆರಿಕದ ಉಪಾಧ್ಯಕ್ಷ ಮೈಕ್ ಪೆನ್ಸ್ ಸುಮಾರು 15 ದಿನಗಳ ಹಿಂದೆ ಸಿಂಗಾಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಜೊತೆ 26/11 ದಾಳಿಯ ಬಗ್ಗೆ ಪ್ರಸ್ತಾಪ ನಡೆಸಿದ್ದರು ಎಂದು ಹೇಳಲಾಗಿದೆ. ದಾಳಿ ನಡೆದು 10 ವರ್ಷಗಳು ಉರುಳಿದರೂ, ಅದರ ಸೂತ್ರಧಾರಿಗಳನ್ನು ನ್ಯಾಯದ ಕಟಕಟೆಯಲ್ಲಿ ನಿಲ್ಲಿಸಲು ವಿಫಲವಾಗಿರುವ ಬಗ್ಗೆ ಅವರು ವಿಷಾದ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಭಯೋತ್ಪಾದಕ ದಾಳಿಗೆ ಕಾರಣರಾದ ವ್ಯಕ್ತಿಗಳು ಯಾವುದೇ ದೇಶದಲ್ಲಿ ಬಂಧನಕ್ಕೊಳಪಡಲು ನೆರವಾಗುವ ಮಾಹಿತಿ ನೀಡಿದವರಿಗೆ 5 ಮಿಲಿಯ ಡಾಲರ್‌ವರೆಗಿನ ಬಹುಮಾನವನ್ನು ನೀಡಲಾಗುವುದು ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ‘ನ್ಯಾಯಕ್ಕಾಗಿ ಬಹುಮಾನ ಕಾರ್ಯಕ್ರಮ’ ಸೋಮವಾರ ಘೋಷಿಸಿದೆ.







