ಜನಾರ್ದನ ಪೂಜಾರಿ ಅನಾರೋಗ್ಯದ ಬಗ್ಗೆ ಸುಳ್ಳು ಸಂದೇಶ ಆರೋಪ: ದೂರು ದಾಖಲು

ಬಂಟ್ವಾಳ, ನ. 26: ಸಾಮಾಜಿಕ ಜಾಲತಾಣಗಳಲ್ಲಿ ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರ ಬಗ್ಗೆ ಸುಳ್ಳು ಸಂದೇಶ ಕಳಿಸಿದವರ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ದ.ಕ.ಜಿಲ್ಲಾ ಬಿಜೆಪಿ ವಕ್ತಾರ ಕೆ.ಹರಿಕೃಷ್ಣ ಬಂಟ್ವಾಳ ಅವರು ಈ ದೂರು ನೀಡಿದ್ದು, ಕಳೆದೆರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವಿಘ್ನ ಸಂತೋಷಿಗಳು ಸೇರಿಕೊಂಡು ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಸುಳ್ಳು ಸುದ್ದಿಯನ್ನು ಹರಡಿಸಿಕೊಂಡು ಬರುತ್ತಿದ್ದಾರೆ. ಈ ಸಂದೇಶ ಪ್ರಸಾರ ಮಾಡಿದವರ ಕುರಿತು ಪೊಲೀಸರು ತೀವ್ರ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಪೊಲೀಸ್ ದೂರಿನಲ್ಲಿ ಒತ್ತಾಯಿಸಿದ್ದಾರೆ.
ಹಿರಿಯ ನಾಯಕ ಜನಾರ್ದನ ಪೂಜಾರಿಯವರು ಆರೋಗ್ಯವಂತರಾಗಿದ್ದು, ತನ್ನ ಬಂಟ್ವಾಳದ ಸ್ವಗೃಹದಲ್ಲಿ ಕುಟುಂಬಿಕರ ಜೊತೆ ಸಂತೋಷದಿಂದ ಇದ್ದಾರೆ ಎಂದವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
Next Story