ನಿಯಂತ್ರಣ ತಪ್ಪಿದ ಬೋಟ್: ಐವರು ಮೀನುಗಾರರ ರಕ್ಷಣೆ

ಮಂಗಳೂರು, ನ.26: ಕಳೆದ ಎರಡು-ಮೂರು ದಿನಗಳ ಹಿಂದೆ ಉಡುಪಿಯ ಮಲ್ಪೆಯಿಂದ ಮೀನು ಬೇಟೆಗೆ ತೆರಳಿದ್ದ ಟ್ರಾಲ್‌ಬೋಟ್‌ವೊಂದು ಹಳೆಯಂಗಡಿ ಸಮೀಪದ ಸಸಿಹಿತ್ಲು ಎಂಬಲ್ಲಿ ನಿಯಂತ್ರಣ ತಪ್ಪಿದ್ದು, ಬೋಟಿನಲ್ಲಿದ್ದ ಐವರು ಮೀನುಗಾರರನ್ನು ಸ್ಥಳೀಯರು ಸೋಮವಾರ ಬೆಳಗ್ಗೆ ರಕ್ಷಿಸಿದ್ದಾರೆ.
ಈ ಟ್ರಾಲ್‌ಬೋಟ್ ನಸುಕಿನಜಾವ ಚಾಲಕನ ನಿಯಂತ್ರಣ ತಪ್ಪಿದ್ದು, ಬಲೆಯೊಂದಿಗೆ ಸಮುದ್ರದಲ್ಲಿಯೇ ಹೊಯ್ದಿಡುತ್ತಿದ್ದು ಅಲೆಗಳ ವಿರುದ್ಧ ತೇಲುತ್ತಿತ್ತು. ಸ್ಥಳೀಯ ಮೀನುಗಾರರು ಮೀನುಗಳ ಬೇಟೆಗೆ ಸಮುದ್ರ ದಡವನ್ನು ತಲುಪಿದಾಗ ಬೋಟ್ ನಿಯಂತ್ರಣ ತಪ್ಪಿರುವುದು ಬೆಳಕಿಗೆ ಬಂದಿದೆ.
ಕೂಡಲೇ ಎಚ್ಚೆತ್ತ ಸ್ಥಳೀಯ ಮೀನುಗಾರರು ಬೋಟ್ ಜೊತೆ ಅದರಲ್ಲಿದ್ದ ಮೀನುಗಾರರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೋಟ್‌ನ್ನು ಸಮುದ್ರದ ದಡದಲ್ಲಿ ಲಂಗರು ಹಾಕಲಾಗಿದೆ.
‘ಯಾವುದೇ ಅನಾಹುತವಾಗಿಲ್ಲ’: ಸಸಿಹಿತ್ಲುವಿನಲ್ಲಿ ನಿಯಂತ್ರಣ ತಪ್ಪಿದ್ದ ಬೋಟ್‌ನಲ್ಲಿದ್ದ ಐವರು ಮೀನುಗಾರರನ್ನು ಸ್ಥಳಿಯರು ರಕ್ಷಿಸಿದ್ದು, ಬೋಟನ್ನು ದಡಕ್ಕೆ ಸೇರಿಸಲಾಗಿದೆ. ಬೆಳಗ್ಗೆಯೇ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಬೋಟ್‌ನಲ್ಲಿ ಮೀನು ಇರಲಿಲ್ಲ. ಬದಲಾಗಿ ಬೋಟ್ ಖಾಲಿಯೇ ಇತ್ತು. ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಸುರತ್ಕಲ್ ಪೊಲೀಸರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.





