ಮಾನವ ಬದುಕಿನ ಸ್ವರೂಪವನ್ನೇ ಬದಲಿಸುವ ಸಂಶೋಧನೆ ನಡೆಸಿದ್ದೇನೆ ಎಂದ ಸಂಶೋಧಕ!
ಇದರ ವಿಶೇಷತೆಯೇನು?: ಇಲ್ಲಿದೆ ಮಾಹಿತಿ

ಹಾಂಕಾಂಗ್, ನ. 26: ತಿದ್ದಿದ ವಂಶವಾಹಿ (ಜೀನ್)ಯನ್ನೊಳಗೊಂಡ ಮಕ್ಕಳ ಸೃಷ್ಟಿಯಲ್ಲಿ ತಾನು ನೆರವು ನೀಡಿರುವುದಾಗಿ ಚೀನಾದ ಸಂಶೋಧಕರೊಬ್ಬರು ಹೇಳಿದ್ದಾರೆ.
ಈ ತಿಂಗಳು ಜನಿಸಿದ ಅವಳಿ ಹೆಣ್ಣು ಶಿಶುಗಳ ಡಿಎನ್‌ಎಯನ್ನು ಪ್ರಭಾವಶಾಲಿ ನೂತನ ಉಪಕರಣವೊಂದರ ಮೂಲಕ ತಾನು ಬದಲಿಸಿರುವುದಾಗಿ ಶೆಂಝನ್‌ನ ವಿಜ್ಞಾನಿ ಹೆ ಜಿಯಂಕುಯಿ ಹೇಳಿದ್ದಾರೆ.
ಈ ಸಂಶೋಧನೆಯು ಜೀವಿಗಳ ಬದುಕನ್ನೇ ಬದಲಿಸುವ ಸಾಮರ್ಥ್ಯ ಹೊಂದಿದೆ ಹಾಗೂ ವಿಜ್ಞಾನದಲ್ಲಿ ಸಾಧಿಸಿದ ಅಗಾಧ ಮುನ್ನಡೆಯಾಗಿದೆ.
ಚೀನಾದಲ್ಲಿ ನಡೆದ ಸಂಶೋಧನೆಯಲ್ಲಿ ತಾನು ಭಾಗವಹಿಸಿರುವುದಾಗಿ ಅಮೆರಿಕದ ವಿಜ್ಞಾನಿಯೊಬ್ಬರು ಹೇಳಿದ್ದಾರೆ.
ಆದರೆ, ಈ ರೀತಿಯ ವಂಶವಾಹಿ ತಿದ್ದುವಿಕೆಯನ್ನು ಅಮೆರಿಕದಲ್ಲಿ ನಿಷೇಧಿಸಲಾಗಿದೆ. ಯಾಕೆಂದರೆ, ಡಿಎನ್‌ಎಯ ಬದಲಾವಣೆಗಳು ಮುಂದಿನ ತಲೆಮಾರುಗಳನ್ನೂ ತಲುಪುತ್ತದೆ ಹಾಗೂ ಇತರ ವಂಶವಾಹಿಗಳಿಗೆ ಹಾನಿ ಮಾಡುವ ಅಪಾಯವನ್ನು ಹೊಂದಿದೆ.
ಮಾನವ ವಂಶವಾಹಿಯಲ್ಲಿ ತಿದ್ದುಪಡಿ ಮಾಡುವುದು ತೀರಾ ಅಪಾಯಕಾರಿ ಎಂಬುದಾಗಿ ಮುಖ್ಯವಾಹಿನಿಯ ಹೆಚ್ಚಿನ ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ.
ಗರ್ಭಧಾರಣೆ ಚಿಕಿತ್ಸೆಯ ವೇಳೆ ಏಳು ದಂಪತಿಗಳ ಭ್ರೂಣಗಳಲ್ಲಿ ಬದಲಾವಣೆ ಮಾಡಿದೆ ಎಂದು ಅವರು ಹೇಳಿದರು. ಈ ಪೈಕಿ, ಈವರೆಗೆ ಓರ್ವ ಮಹಿಳೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.
ತನ್ನ ಈ ಪ್ರಯೋಗದ ಉದ್ದೇಶ ವಂಶವಾಹಿ ಕಾಯಿಲೆಯನ್ನು ಗುಣಪಡಿಸುವುದು ಅಥವಾ ತಡೆಯುವುದಾಗಿರಲಿಲ್ಲ ಎಂದು ಹೇಳಿರುವ ಅವರು, ಭವಿಷ್ಯದಲ್ಲಿ ಸಂಭಾವ್ಯ ಎಚ್‌ಐವಿ ಸೋಂಕಿಗೆ ನಿರೋಧತೆಯನ್ನು ಬೆಳೆಸುವುದು ತನ್ನ ಉದ್ದೇಶವಾಗಿದೆ ಎಂದರು.







