ಜ.18ರಿಂದ ದಕ್ಷಿಣ ಏಷ್ಯನ್ ಥ್ರೋಬಲ್ ಪಂದ್ಯಾವಳಿ
ಬೆಂಗಳೂರು, ನ.26: ಇದೇ ಮೊದಲ ಬಾರಿಗೆ ದಕ್ಷಿಣ ಏಷ್ಯನ್ ಥ್ರೋಬಲ್ ಪಂದ್ಯಾವಳಿಗಳು ಜ.18ರಿಂದ ಮೂರು ದಿನಗಳವರೆಗೆ ನಗರದ ಕಠೀರವ ಕ್ರೀಡಾಂಗಣದಲ್ಲಿ ನಡೆಯಲಿವೆ ಎಂದು ಏಷ್ಯನ್ ಥ್ರೋಬಾಲ್ ಫೆಡರೇಷನ್‌ನ ಅಧ್ಯಕ್ಷ ಎ.ಯಾಸ ರಾಮಚಂದ್ರ ತಿಳಿಸಿದ್ದಾರೆ.
ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂದ್ಯಾವಳಿಯಲ್ಲಿ ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ಭೂತಾನ್, ಮಾಲ್ಡೀವ್ಸ್ ಸೇರಿದಂತೆ ಅನೇಕ ದಕ್ಷಿಣ ಏಷ್ಯಾ ರಾಷ್ಟ್ರಗಳು ಭಾಗವಹಿಸಲಿದ್ದು, ಥ್ರೋಬಾಲ್ ಕ್ರೀಡೆಯನ್ನು ಪ್ರೋತ್ಸಾಹಿಸುವುದಕ್ಕಾಗಿ ಈ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಭಾರತದಲ್ಲಿಯೇ ಆರಂಭವಾದ ಥ್ರೋಬಾಲ್, ಹಳೆಯ ಕ್ರೀಡೆಯೆಂದು ಗುರುತಿಸಲಾಗಿದ್ದರೂ, ಇದಕ್ಕೆ ಜಾಗತಿಕ ಮನ್ನಣೆ ಲಭಿಸಿಲ್ಲ. ಹೀಗಾಗಿ ಮೊದಲ ದಕ್ಷಿಣ ಥ್ರೋಬಲ್ ಪಂದ್ಯಾವಳಿಗಳನ್ನು ಆಯೋಜಿಸಲಾಗಿದ್ದು, ವಿವಿಧ ಅಂತರ್‌ರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಈ ಕ್ರೀಡೆಯನ್ನು ಸೇರಿಸುವುದನ್ನು ಫೆಡರೇಷನ್ ಎದುರು ನೋಡುತ್ತಿದೆ ಎಂದರು.
ಪುರುಷರು ಮತ್ತು ಮಹಿಳಾ ತಂಡಗಳು ಅನೇಕ ಅಂತರ್‌ರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಗೆಲುವು ದಾಖಲಿಸಿದ್ದಾರೆ. ಆದರೆ, ಅವರಿಗೆ ಅರ್ಹ ಶ್ರೇಯಸ್ಸು ಇನ್ನೂ ಲಭಿಸಿಲ್ಲ. ಬಹಳಷ್ಟು ಗಮನ ಪಡೆಯದ ಕ್ರೀಡೆ ಥ್ರೋಬಲ್ ಆಗಿದ್ದು, ಇದನ್ನು ಬದಲಾಯಿಸಲು ಈ ಪಂದ್ಯಾವಳಿಯ ಮೂಲಕ ಜನರಲ್ಲಿ ಉತ್ಸಾವವನ್ನು ಮೂಡಿಸಲು ಹಾಗೂ ಕ್ರೀಡೆಯನ್ನು ಬೆಳಕಿಗೆ ತರಲು ಇಚ್ಛಿಸುತ್ತಿದ್ದೇವೆ ಎಂದು ನುಡಿದರು.







