ಯುಕ್ರೇನ್ ನೌಕಾಪಡೆಯ 3 ಹಡಗು ವಶಪಡಿಸಿಕೊಂಡ ರಶ್ಯ
ಮಾಸ್ಕೋ, ನ. 26: ಕ್ರೈಮಿಯ ಕರಾವಳಿಯಲ್ಲಿ ಕಾಣಿಸಿಕೊಂಡ ಯುಕ್ರೇನ್ ನೌಕಾಪಡೆಯ ಮೂರು ಹಡಗುಗಳನ್ನು ರಶ್ಯ ರವಿವಾರ ವಶಪಡಿಸಿಕೊಂಡಿದೆ.
ಹಡಗುಗಳ ಮೇಲೆ ಗುಂಡು ಹಾರಿಸಿ ಹಲವಾರು ನಾವಿಕರನ್ನು ಗಾಯಗೊಳಿಸಿದ ಬಳಿಕ ಅವುಗಳನ್ನು ರಶ್ಯ ನೌಕಾ ಪಡೆ ಸಿಬ್ಬಂದಿ ತಮ್ಮ ವಶಕ್ಕೆ ತೆಗೆದುಕೊಂಡರು.
ಯುಕ್ರೇನ್ಗೆ ಸೇರಿದ್ದ ಕ್ರೈಮಿಯ ರಾಜ್ಯವನ್ನು ರಶ್ಯ ತನ್ನ ಭೂಭಾಗಕ್ಕೆ ಸೇರ್ಪಡೆಗೊಳಿಸಿರುವುದನ್ನು ಸ್ಮರಿಸಬಹುದಾಗಿದೆ.
ಕಪ್ಪು ಸಮುದ್ರದಲ್ಲಿದ್ದ ಯುಕ್ರೇನ್ ನೌಕಾಪಡೆಯ ಹಡಗುಗಳನ್ನು ತನ್ನ ಗಡಿ ಗಸ್ತು ದೋಣಿಗಳು ವಶಪಡಿಸಿಕೊಂಡಿವೆ ಹಾಗೂ ಅವುಗಳು ನಿಲ್ಲುವಂತೆ ಮಾಡಲು ಬಲಪ್ರಯೋಗ ನಡೆಸಬೇಕಾಯಿತು ಎಂಬುದಾಗಿ ರಶ್ಯದ ಎಫ್ಎಸ್ಬಿ ಭದ್ರತಾ ಸಂಸ್ಥೆ ಸೋಮವಾರ ತಿಳಿಸಿದೆ ಎಂಬುದಾಗಿ ರಶ್ಯದ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಘಟನೆಯಲ್ಲಿ ಮೂವರು ಯುಕ್ರೇನ್ ನಾವಿಕರು ಗಾಯಗೊಂಡಿದ್ದಾರೆ ಹಾಗೂ ಈಗ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಎಫ್ಎಸ್ಬಿ ಹೇಳಿದೆ. ಅವರ ಜೀವಕ್ಕೆ ಅಪಾಯವಿಲ್ಲ ಎಂದು ಅದು ತಿಳಿಸಿದೆ.
Next Story