ಅಕ್ರಮ ಮರಳು ಸಾಗಾಟ : ಆರು ಲಾರಿ ವಶ
ಉಳ್ಳಾಲ,ನ.26: ಮಂಗಳೂರಿನಿಂದ ಕಾಸರಗೋಡು ಕಡೆಗೆ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಆರು ಮರಳು ಲಾರಿಗಳನ್ನು ತಲಪಾಡಿ ಬಳಿ ರಾತ್ರಿ ಗಸ್ತು ತಿರುಗುತ್ತಿದ್ದ ಉಳ್ಳಾಲ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು ಚಾಲಕರು ಪರಾರಿಯಾದ ಘಟನೆ ರವಿವಾರ ತಡರಾತ್ರಿ ನಡೆದಿದೆ.
ಮಂಗಳೂರು ಕಣ್ಣೂರು ನೇತ್ರಾವತಿ ಬದಿಯಿಂದ ನಾಲ್ಕು ಲಾರಿ ಹಾಗೂ ಎರಡು ಟಿಪ್ಪರ್ ಗಳಲ್ಲಿ ಮರಳು ತುಂಬಿಸಿ ಕೇರಳ ಕಡೆಗೆ ಸಾಗಿಸುವ ಮಾಹಿತಿ ಪಡೆದ ಉಳ್ಳಾಲ ಇನ್ಸ್ ಪೆಕ್ಟರ್ ಗೋಪಿಕೃಷ್ಣ ಅವರ ಸೂಚನೆ ಮೇರೆಗೆ ತಲಪಾಡಿ ಬಳಿ ಗಸ್ತು ತಿರುಗುತ್ತಿದ್ದ ಉಳ್ಳಾಲ ಪೊಲೀಸರು ನಾಲ್ಕು ಲಾರಿ ಹಾಗೂ ಎರಡು ಟಿಪ್ಪರ್ ಮರಳು ಸಮೇತ ವಶಕ್ಕೆ ತೆಗದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರು ದಾಳಿ ನಡೆಸುತ್ತಿದ್ದಂತೆಯೇ ಲಾರಿ ಹಾಗೂ ಟಿಪ್ಪರನ್ನು ರಸ್ತೆಯಲ್ಲಿಯೇ ಬಿಟ್ಟು ಚಾಲಕರು ಪರಾರಿಯಾಗಿದ್ದಾರೆ. ವಶಕ್ಕೆ ಪಡೆದ ನಾಲ್ಕು ಲಾರಿ ಹಾಗೂ ಎರಡು ಟಿಪ್ಪರ್‍ಗಳನ್ನು ಗಣಿ ಹಾಗೂ ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರ ಮಾಡಿದ್ದಾರೆ.
ಜಿಲ್ಲೆಯಲ್ಲಿ ಮರಳು ಲಭ್ಯ ಇಲ್ಲದಿರುವುದರಿಂದ ಕೆಲವೇ ಮಂದಿಗೆ ನಿಯಮಾನುಸಾರ ಮರಳು ಸಾಗಾಟಕ್ಕೆ ಪರವಾನಗಿ ನೀಡಲಾಗಿದ್ದು ಕೇರಳಕ್ಕೆ ಮರಳು ಸಾಗಿಸಬಾರದು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿತ್ತು. ಹಾಗಿದ್ದರೂ ಅಕ್ರಮ ಸಾಗಾಟ ಮುಂದುವರಿದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಉಳ್ಳಾಲ ಹಾಗೂ ಕೊಣಾಜೆ ಪೊಲೀಸರು ಅಕ್ರಮ ಮರಳು ಸಾಗಾಟಕ್ಕೆ ಸೂಕ್ತ ಕ್ರಮ ಕೈಗೊಂಡಿದ್ದು ಅದರಂತೆ ರವಿವಾರ ನಾಲ್ಕು ಲಾರಿ ಹಾಗೂ ಎರಡು ಟಿಪ್ಪರ್ ವಶಪಡಿಸಿಕೊಂಡು, ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಹಸ್ತಾಂತರಿಸಿದ್ದು, ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.