ತೋಟ ಬೆಂಗ್ರೆ: ಏಳು ಮಂದಿಯಿಂದ ಯುವತಿಯ ಸಾಮೂಹಿಕ ಅತ್ಯಾಚಾರ

ಮಂಗಳೂರು, ನ.26: ನಗರದ ಸಮೀಪದ ತೋಟ ಬೆಂಗ್ರೆಯಲ್ಲಿ ವಿಹಾರಕ್ಕೆ ತೆರಳಿದ್ದ ಯುವತಿಯೋರ್ವಳನ್ನು ಏಳು ಮಂದಿ ದುಷ್ಕರ್ಮಿಗಳ ತಂಡವೊಂದು ಅಪಹರಿಸಿ ಸಾಮೂಹಿಕ ಅತ್ಯಾಚಾರಗೈದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಈ ದುಷ್ಕೃತ್ಯವು ನ.18ರಂದು ನಡೆದಿದೆ ಎಂದು ತಿಳಿದುಬಂದಿದೆ. ಸಂತ್ರಸ್ತೆಯನ್ನು ಕಾರ್ಖಾನೆಯೊಂದರಲ್ಲಿ ಕೂಲಿ ಕಾರ್ಮಿಕಳಾಗಿದ್ದ ಹಳ್ಳಿ ಪ್ರದೇಶದ ಯುವತಿ ಎಂದು ಗುರುತಿಸಲಾಗಿದೆ. ಹೊರರಾಜ್ಯದ ಯುವಕನೋರ್ವನೊಂದಿಗೆ ಸ್ನೇಹ ಸಂಬಂಧ ಹೊಂದಿದ್ದ ಈ ಯುವತಿ ನ.18ರಂದು ಮಧ್ಯಾಹ್ನ 12ಕ್ಕೆ ಸುಮಾರಿಗೆ ತೋಟ ಬೆಂಗರೆ ಅಳಿವೆಬಾಗಿಲು ಬೀಚ್‌ಗೆ ತೆರಳಿದ್ದಳೆನ್ನಲಾಗಿದೆ. ಈ ವೇಳೆ ಇವರಿಬ್ಬರು ಅಲ್ಲಿನ ದ್ವೀಪ ಪ್ರದೇಶವನ್ನು ಪ್ರವೇಶಿಸಿದ್ದನ್ನು ಗಮನಿಸಿದ ಏಳು ಮಂದಿಯ ತಂಡ ಅವರಿಬ್ಬರನ್ನು ಬೆದರಿಸಿದೆ. ಬಳಿಕ ದುಷ್ಕರ್ಮಿಗಳು ಯುವಕನ ಮೇಲೆ ಹಲ್ಲೆ ನಡೆಸಿ ಯುವತಿಯನ್ನು ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ದೂರಲಾಗಿದೆ.
ತನ್ನ ಮೇಲೆ ಏಳು ಮಂದಿ ಅತ್ಯಾಚಾರ ಎಸಗಿರುವುದಾಗಿ ಸಂತ್ರಸ್ತ ಯುವತಿ ನಗರ ಮಹಿಳಾ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾಳೆ.
ಈ ಬಗ್ಗೆ ಅಪರಿಚಿತ ಏಳು ಮಂದಿಯ ವಿರುದ್ಧ ಅತ್ಯಾಚಾರ(376 ಡಿ ಸೆಕ್ಷನ್), ಹಲ್ಲೆ(323 ಸೆ.), ಶಾಂತಿಭಂಗ(504 ಸೆ.) ಹಾಗೂ ಬೆದರಿಕೆ (506) ಪ್ರಕರಣ ದಾಖಲಿಸಿಕೊಂಡಿರುವ ನಗರ ಮಹಿಳಾ ಪೊಲೀಸರು ಸ್ಥಳೀಯ ಆರು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಕುರಿತು ಜಿಲ್ಲಾ ಪೊಲೀಸ್ ವ್ಯಾಪ್ತಿಯ ಠಾಣೆಯೊಂದರ ಪೊಲೀಸರಿಗೆ ಮಾಹಿತಿ ನೀಡಿದ್ದರೂ ಅಲ್ಲಿ ದೂರು ದಾಖಲಿಸಿಕೊಂಡಿರಲಿಲ್ಲ ಎಂದು ಸಂತ್ರಸ್ತೆ ನಗರ ಪೊಲೀಸರಿಗೆ ತಿಳಿಸಿದ್ದಾಳೆ. ಈ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.







