ಶಿವಮೊಗ್ಗ: ಚೂರಿ ಇರಿತಕ್ಕೊಳಗಾಗಿದ್ದ ವಿದ್ಯಾರ್ಥಿ ಸಾವು ಪ್ರಕರಣ; ಇಬ್ಬರ ಬಂಧನ
ಪ್ರಮುಖ ಆರೋಪಿ ಬಂಧನಕ್ಕೆ ತೀವ್ರಗೊಂಡ ತನಿಖೆ

ಶಿವಮೊಗ್ಗ, ನ. 26: ಚೂರಿ ಇರಿತದಿಂದ ವಿದ್ಯಾರ್ಥಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಜಿಲ್ಲೆಯ ತೀರ್ಥಹಳ್ಳಿ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ತಲೆಮರೆಸಿಕೊಂಡಿರುವ ಪ್ರಕರಣದ ಮುಖ್ಯ ಆರೋಪಿಯ ಸೆರೆಗೆ ತನಿಖೆ ತೀವ್ರಗೊಳಿಸಿದ್ದಾರೆ.
ತೀರ್ಥಹಳ್ಳಿ ತಾಲೂಕಿನವರಾದ ಕೈಮರದ ನಿವಾಸಿ ಉದಯ್ (18) ಹಾಗೂ ರಾಮಕೃಷ್ಣಪುರದ ನಿವಾಸಿ ಸಂಚಿತ್ (20) ಬಂಧಿತರೆಂದು ಗುರುತಿಸಲಾಗಿದೆ. ಮೃತ ವಿದ್ಯಾರ್ಥಿ ದರ್ಶನ್ (17) ಗೆ ಚೂರಿಯಿಂದ ಇರಿದ ವೇಳೆ, ಪ್ರಕರಣದ ಮುಖ್ಯ ಆರೋಪಿ ಆಲ್ವಿನ್ ಡಿಸೋಜಾ ಜೊತೆ ಇವರಿದ್ದರು. ಘಟನೆಯ ನಂತರ ಇವರು ಕೂಡ ತಲೆಮರೆಸಿಕೊಂಡಿದ್ದರು.
ಈ ಕುರಿತಂತೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಮೊದಲು ಹತ್ಯೆ ಯತ್ನ, ನಂತರ ಕೊಲೆ ಪ್ರಕರಣ ದಾಖಲಾಗಿತ್ತು. ಸದ್ಯ ನಾಪತ್ತೆಯಾಗಿರುವ ಮುಖ್ಯ ಆರೋಪಿ ಆಲ್ವಿನ್ ಡಿಸೋಜ ಬಂಧನಕ್ಕೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಈಗಾಗಲೇ ಆರೋಪಿಯ ಸುಳಿವು ಪೊಲೀಸರಿಗೆ ಲಭ್ಯವಾಗಿದೆ ಎನ್ನಲಾಗಿದ್ದು, ಶೀಘ್ರ ಬಂಧಿಸುವ ಸಾಧ್ಯತೆಯಿದೆ ಎಂದು ಪೊಲೀಸ್ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ. ಸರ್ಕಲ್ ಇನ್ಸ್ಪೆಕ್ಟರ್ ಸುರೇಶ್ ನೇತೃತ್ವದ ಪೊಲೀಸ್ ತಂಡ ಪ್ರಕರಣದ ತನಿಖೆ ನಡೆಸುತ್ತಿದೆ.
ಘಟನೆಯ ಹಿನ್ನೆಲೆ: ಕಳೆದ ನ. 23 ರಂದು ತೀರ್ಥಹಳ್ಳಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜ್ನ ಪ್ರಥಮ ಪಿಯುಸಿ ವಿದ್ಯಾರ್ಥಿ, ಯಡೇಹಳ್ಳಿಕೆರೆ ಗ್ರಾಮದ ನಿವಾಸಿ ದರ್ಶನ್ಗೆ ಕಾಲೇಜು ಬಳಿಯೇ ಆರೋಪಿ ಆಲ್ವಿನ್ ಡಿಸೋಜ ಚೂರಿಯಿಂದ ಹೊಟ್ಟೆಗೆ ಇರಿದಿದ್ದ. ಗಂಭೀರ ಸ್ಥಿತಿಯಲ್ಲಿದ್ದ ದರ್ಶನ್ಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ, ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತದನಂತರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಎರಡು ದಿನಗಳ ಹಿಂದೆ ಮೃತಪಟ್ಟಿದ್ದರು.
ಆರೋಪಿ ಡಿಸೋಜನು ದರ್ಶನ್ ಸಹೋದರಿಯನ್ನು ಪ್ರೀತಿಸುತ್ತಿದ್ದ. ಸಹೋದರಿಗೆ ತೊಂದರೆ ಕೊಡದಂತೆ ಆರೋಪಿಗೆ ದರ್ಶನ್ ಹಲವು ಬಾರಿ ತಿಳಿಸಿದ್ದ. ಒಂದೆರೆಡು ಬಾರಿ ಇಬ್ಬರ ನಡುವೆ ಗಲಾಟೆಯೂ ಆಗಿತ್ತು. ಈ ಕಾರಣದಿಂದಲೇ ಆರೋಪಿಯು ಈ ಕೃತ್ಯ ನಡೆಸಿದ್ದಾನೆ ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.







