ಕಸ್ತೂರಿ ರಂಗನ್ ವರದಿ ಬಗ್ಗೆ ತಳಮಟ್ಟದ ಸರ್ವೇ ಅಗತ್ಯ: ಸಂಸದೆ ಶೋಭಾ ಕರಂದ್ಲಾಜೆ

ಮೂಡಿಗೆರೆ, ನ.26: ಕಸ್ತೂರಿ ರಂಗನ್ ವರದಿ ಮಲೆನಾಡಿಗೆ ಮಾರಕವಾಗಿದ್ದು, ಕೇರಳ ಸರಕಾರವು ತಳಮಟ್ಟದ ಸರ್ವೇ ನಡೆಸುವ ಮೂಲಕ ಸುಪ್ರೀಂಕೋರ್ಟ್‌ಗೆ ವರದಿ ನೀಡಿದ ಮಾದರಿಯಲ್ಲಿ, ಬೀಸುತ್ತಿರುವ ತೂಗುಗತ್ತಿಯಿಂದ ಪಾರಾಗಲು ರಾಜ್ಯದಿಂದಲು ಪರಿಪೂರ್ಣ ವರದಿ ನೀಡಿ ರೈತರು ಮತ್ತು ಹಳ್ಳಿಗರನ್ನು ಪಾರು ಮಾಡಬೇಕಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಮುದ್ರೆಮನೆ ಕಾಫಿ ಆ್ಯಂಡ್ ಸ್ಪೈಸಸ್ ಆವರಣದಲ್ಲಿ ಹಳ್ಳಿಹಬ್ಬದ ಅಂಗವಾಗಿ ನಡೆದ ಉತ್ತಮ ಕಾಫಿ ಬೆಳೆಗಾರರಿಗೆ ಪ್ರಶಸ್ತಿ ಪ್ರದಾನ ಹಾಗೂ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಉಪಗ್ರಹ ಸರ್ವೇ ಮೂಲಕ ಕಸ್ತೂರಿ ರಂಗನ್ ವರದಿ ತಯಾರಿಸಲಾಗಿದೆ.ರೈತರ ಕೃಷಿಯಾದ ಅಡಕೆ, ಕಾಫಿ, ಕಾಳುಮೆಣಸು ರಬ್ಬರ್ ಹೀಗೆ ಹಸಿರು ಕಂಡಿದ್ದೆಲ್ಲವನ್ನು ಕಾಡು ಎಂದು ಗುರುತಿಸಲಾಗಿದೆ. ಇದನ್ನು ಜಾರಿಗೆ ತರಲು ಕೆಲವು ಸಂಘಟನೆಗಳು ಸುಪ್ರೀಂ ಕದತಟ್ಟಿದ್ದು, ಇದು ಸಮಸ್ಯೆಯಾಗಿದೆ. ರಾಜ್ಯವು ಕೂಡಲೇ ಸಮಗ್ರ ವರದಿ ಸಲ್ಲಿಸಬೇಕು ಎಂದರು.
ಶಾಸಕ ಎಂಪಿ ಕುಮಾರಸ್ವಾಮಿ ಮಾತನಾಡಿ, ಕಾಫಿ ಬೆಳೆಗಾರರನ್ನು ಹೊರಗಿನ ಜನತೆ ಅತ್ಯಂತ ಶ್ರೀಮಂತರು ಎಂದು ಬಿಂಬಿಸಲಾಗುತ್ತಿದೆ. ಆದರೆ ಇಲ್ಲಿ ಬೆಳೆಗಾರರು ಅತ್ಯಂತ ಕಷ್ಟದಲ್ಲಿ ಇದ್ದಾರೆ. ಬೆಲೆ ಕಡಿಮೆಯಾಗಿದೆ, ಅತಿವೃಷ್ಟಿ ಉಂಟಾಗಿದೆ ಎಂದರು. ಎಮ್ಮೆಲ್ಸಿ ಎಂ.ಕೆ ಪ್ರಾಣೇಶ್, ಕಾಂಗ್ರೆಸ್‌ನ ಹಿರಿಯ ನಾಯಕ ಬಿಎಲ್ ಶಂಕರ್ ಮಾತನಾಡಿದರು. ಮೋಹಿನಿ ಸಿದ್ದೇಗೌಡ ಕೃಷಿಕರ ಇಂಗ್ಲಿಷ್ ಸಂಚಿಕೆ ಬಿಡುಗಡೆ ಮಾಡಿದರು,
ಮಾಜಿ ಸಚಿವರಾದ ಮೋಟಮ್ಮ, ಬಿ.ಬಿ ನಿಂಗಯ್ಯ, ವಾಜಿ ಶಾಸಕ. ಎಚ್.ಎಂ ವಿಶ್ವನಾಥ್, ತಾಪಂ ಅಧ್ಯಕ್ಷ ಕೆ.ಸಿ ರತನ್, ಜೈರಾಮ್ ಬಿದರಹಳ್ಳಿ, ಬಾಲ್‌ರಾಜ್ ಬಾಳೂರು, ಅರೆಕೋಡಿಗೆ ಶಿವಣ್ಣ, ಸುಧಾಕರ್ ಗೋಣಿಬೀಡು, ಡಿ.ಬಿ.ಸುಬ್ಬೆಗೌಡ, ದಿನೇಶ್ ದೇವವೃಂದ, ದೀಪಕ್ ದೇವವೃಂದ, ಅಚ್ಚನಹಳ್ಳಿ ಸುಚೇತನ ಮತ್ತಿತರರು ಉಪಸ್ಥಿತರಿದ್ದರು, ಉತ್ತಮ ಅರೇಬಿಕಾ ಕಾಫಿ ಬೆಳೆಗಾರ ಪ್ರಶಸ್ತಿ, ಆಲೂರಿನ ಆರ್. ವೆಂಕಟೇಶ್ ಹಾಗೂ ಉತ್ತಮ ರೋಬಾಸ್ಟ್ ಬೆಳೆಗಾರ ಪ್ರಶಸ್ತಿಯನ್ನು ಕುಶಾಲನಗರದ ಜರ್ಮಿ ಡಿಸೋಜ ಪಡೆದರು.







