ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭದ ಧ್ವನಿ ಉಡುಗಿಸಿದರೆ ಭಾರತವು ನಾಝಿ ರಾಷ್ಟ್ರವಾಗುತ್ತದೆ: ಮದ್ರಾಸ್ ಹೈಕೋರ್ಟ್
ಚೆನ್ನೈ,ನ.26: ಪತ್ರಿಕಾ ಹಾಗೂ ಮಾಧ್ಯಮಗಳ ಸ್ವಾತಂತ್ರವನ್ನು ಇತ್ತೀಚಿಗೆ ಬಲವಾಗಿ ಪ್ರತಿಪಾದಿಸಿರುವ ಮದ್ರಾಸ್ ಉಚ್ಚ ನ್ಯಾಯಾಲಯವು,ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿರುವ ಪತ್ರಿಕಾ ರಂಗದ ಸುರಕ್ಷತೆಯನ್ನು ಕಾಯ್ದುಕೊಳ್ಳದಿದ್ದರೆ ಭಾರತವೂ ನಾಝಿ ರಾಷ್ಟ್ರವಾಗಬಹುದು ಎಂದು ಹೇಳಿದೆ.
2012ರಲ್ಲಿ ಇಂಡಿಯಾ ಟುಡೇ ಸಾಪ್ತಾಹಿಕದ ತಮಿಳು ಆವೃತ್ತಿಯ ವಿರುದ್ಧ ಅಂದಿನ ಎಐಎಡಿಎಂಕೆ ಸರಕಾರವು ದಾಖಲಿಸಿದ್ದ ಮಾನಹಾನಿ ಪ್ರಕರಣವನ್ನು ವಜಾಗೊಳಿಸಿದ ನ್ಯಾ.ಪಿ.ಎನ್.ಪ್ರಕಾಶ್ ಅವರು ತನ್ನ ತೀರ್ಪಿನಲ್ಲಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಭಾರತವು ಸ್ಪಂದನಶೀಲ ಪ್ರಜಾಪ್ರಭುತ್ವವಾಗಿದ್ದು,ಪತ್ರಿಕಾ ರಂಗವು ನಿಸ್ಸಂಶಯವಾಗಿ ಅದರ ಅನಿವಾರ್ಯ ಅಂಗವಾಗಿದೆ. ಮಾಧ್ಯಮ ಕ್ಷೇತ್ರದ ಧ್ವನಿಯನ್ನು ಹೀಗೆ ಉಡುಗಿಸುತ್ತಿದ್ದರೆ ಭಾರತವು ನಾಝಿ ರಾಷ್ಟ್ರವಾಗಲಿದೆ ಮತ್ತು ನಮ್ಮ ಸ್ವಾತಂತ್ರ ಹೋರಾಟಗಾರರು ಹಾಗೂ ಸಂವಿಧಾನ ನಿರ್ಮಾಪಕರ ಕಠಿಣ ಶ್ರಮವು ವ್ಯರ್ಥಗೊಳ್ಳಲಿದೆ ಎಂದ ನ್ಯಾ.ಪ್ರಕಾಶ್,ಕ್ವಚಿತ್ತಾಗಿ ಉಲ್ಲಂಘನೆಗಳಿದ್ದರೂ ಪ್ರಜಾಪ್ರಭುತ್ವದಲ್ಲಿ ಪತ್ರಿಕಾ ರಂಗದ ಪಾತ್ರವನ್ನು ಪರಿಗಣಿಸಿ ಅದರ ಸ್ವಾತಂತ್ರವನ್ನು ರಕ್ಷಿಸಬೇಕು ಎಂದು ಒತ್ತಿ ಹೇಳಿದರು.
ಸಾರ್ವಜನಿಕರ ಉಪಯೋಗಕ್ಕಾಗಿ ಮತ್ತು ಅಲ್ಪಾವಧಿಯ ಸಾರ್ವಜನಿಕರ ನೆನಪುಗಳನ್ನು ಪುನಃ ತಾಜಾಗೊಳಿಸಲು ರಾಜಕೀಯ ಪಕ್ಷಗಳು ಮತ್ತು ಸಾರ್ವಜನಿಕ ಜೀವನದಲ್ಲಿಯ ವ್ಯಕ್ತಿಗಳಿಗೆ ಸಂಬಂಧಿಸಿದ ಇತ್ತೀಚಿನ ಮತ್ತು ಹಿಂದಿನ ಘಟನೆಗಳನ್ನು ಪೋಣಿಸಿ ಅವರ ಮುಂದಿರಿಸುವ ಮಹತ್ವಪೂರ್ಣ ಕರ್ತವ್ಯವನ್ನು ಮಾಧ್ಯಮಗಳು ನಿರ್ವಹಿಸುತ್ತಿವೆ. ಇದಕ್ಕಾಗಿ ಮಾಧ್ಯಮಗಳ ಮೇಲೆ ನಿರ್ಬಂಧಗಳನ್ನು ಹೇರಿದರೆ ಈ ದೇಶದಲ್ಲಿ ಪ್ರಜಾಪ್ರಭುತ್ವವು ನಾಶಗೊಳ್ಳುತ್ತದೆ ಎಂದ ಅವರು,ಯಾರೂ ಸಾರ್ವಜನಿಕ ಜೀವನವನ್ನು ಆಹ್ವಾನದಿಂದ ಪ್ರವೇಶಿಸುವುದಿಲ್ಲ ಮತ್ತು ಸ್ವಂತ ಇಚ್ಛೆಯಿಂದಲೇ ಆ ಕೆಲಸವನ್ನು ಮಾಡುತ್ತಾರೆ. ಹೀಗಿರುವಾಗ ಬಹಿರಂಗ ಟೀಕೆಗಳಿಗೂ ಅವರು ತೆರೆದುಕೊಳ್ಳಬೇಕಾಗುತ್ತದೆ ಎಂದರು.