ಪಂಚಾಯತ್ ಅವ್ಯವಹಾರದ ವಿರುದ್ದ ದೂರು ನೀಡಿದಕ್ಕೆ ಎನ್‍ಒಸಿ ನೀಡದೆ ಅನ್ಯಾಯ : ಆರೋಪ
ಪುತ್ತೂರು : ಕಾಣಿಯೂರು ಗ್ರಾಮ ಪಂಚಾಯತ್‍ನಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಕುರಿತು ದೂರು ನೀಡಿದ ಕಾರಣಕ್ಕೆ ಸರಿಯಾದ ದಾಖಲೆಗಳಿದ್ದರೂ ತನ್ನ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಎನ್‍ಒಸಿ ನೀಡದೆ ಪಂಚಾಯತ್ ತನಗೆ ಅನ್ಯಾಯ ಎಸಗುತ್ತಿದೆ ಎಂದು ಕಾಣಿಯೂರು ಗ್ರಾಮದ ನಾವೂರು ನಿವಾಸಿ ತೇಜಪ್ರಸಾದ್ ಎಂಬವರು ಆರೋಪಿಸಿದ್ದಾರೆ.
ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ತನಗೆ ಕಳೆದ ಜನವರಿ 18ರಂದು 94ಸಿ ಯಡಿ ಮಂಜೂರಾಗಿ ಹಕ್ಕು ಪತ್ರ ನೀಡಲಾಗಿದ್ದ ಸ್ಥಳದಲ್ಲಿದ್ದ ಹಳೆಯ ಮನೆಯನ್ನು ಕಡೆವಿ ಹೊಸ ಮನೆ ನಿರ್ಮಾಣ ಮಾಡಿದ್ದೇನೆ. ವಿದ್ಯುತ್ ಸಂಪರ್ಕಕ್ಕಾಗಿ ಮೆಸ್ಕಾಂಗೆ ಪಂಚಾಯತ್ ನಿರಾಪೇಕ್ಷಣಾ ಪತ್ರ ಬೇಕಾಗಿದ್ದು, ಇದಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ನಿರಾಪೇಕ್ಷಣಾ ಪತ್ರ ನೀಡದೆ ಸತಾಯಿಸುತ್ತಿದೆ. ಇದರಿಂದಾಗಿ ಪತ್ನಿ, ಇಬ್ಬರು ಶಾಲೆ ಕಲಿಯುತ್ತಿರುವ ಮಕ್ಕಳನ್ನೊಳಗೊಂಡ ನನ್ನ ಸಂಸಾರ ಚಿಮಿಣಿ ದೀಪದ ಬೆಳಕಿನಲ್ಲೇ ದಿನ ಕಳೆಯುವಂತಾಗಿದೆ ಎಂದರು.
ಕಾಣಿಯೂರು ಗ್ರಾಮ ಪಂಚಾಯತ್ ಹಾಲಿ ಅಧ್ಯಕ್ಷೆ ,ಚಾರ್ವಾಕ ಗ್ರಾಮದ ಖಂಡಿಗ ನಿವಾಸಿ ಸೀತಮ್ಮ ಅವರ ಪತಿ ಹರಿಯಪ್ಪ ಗೌಡ ಅವರು ಚಾರ್ವಾಕ ಗ್ರಾಮದ ಸರ್ವೆ ನಂಬ್ರ 22/10ರಲ್ಲಿ 10ಸೆಂಟ್ಸ್ ಸ್ಥಳವನ್ನು ಭೂಪರಿವರ್ತನೆ ಮಾಡಿ,ಈ ದಾಖಲೆಗಳನ್ನು ಪಂಚಾಯತ್‍ಗೆ ನೀಡಿ ಆರ್‍ಸಿಸಿ ಮನೆ ನಿರ್ಮಿಸಲು ಪರವಾನಿಗೆ ಪಡೆದು, ಚಾರ್ವಾಕ ಗ್ರಾಮದ ಸರ್ಕಾರಿ ಸುರಕ್ಷಿತ ಕಾಡು ಪ್ರದೇಶದ ಸರ್ವೆ ನಂಬ್ರ 26/1(ಪಿ1)ರಲ್ಲಿ ಮನೆ ನಿರ್ಮಿಸಿರುವುದು ಅಧಿಕಾರಿಗಳ ಸ್ಥಳ ಪರಿಶೀಲನೆ ವೇಳೆ ಕಂಡು ಬಂದಿತ್ತು. ಅಲ್ಲದೆ ಗೃಹ ನಿರ್ಮಾಣದ ಬಾಬ್ತು ವಿಜಯ ಬ್ಯಾಂಕಿನಿಂದ ರೂ.14 ಲಕ್ಷ ಸಾಲ ಪಡೆದಿದ್ದರು. ಈ ಪ್ರಕರಣದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಸ್ವಜನ ಪಕ್ಷಪಾತ ಮಾಡಿ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದರು.
ಈ ಹಿನ್ನಲೆಯಲ್ಲಿ ಸಾಮಾಜಿಕ ಹೋರಾಟಗಾರ ರುಕ್ಮಯ್ಯ ಗೌಡ ಮಲೆಕೆರ್ಜಿ ಅವರು ನಡೆಸಿದ ಹೋರಾಟದ ಫಲವಾಗಿ ಕಳೆದ ಎಪ್ರಿಲ್ 11ರಂದು ನಡೆದಿದ್ದ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಈ ಮನೆ ನಿರ್ಮಾಣ ಪರವಾನಿಗೆಯನ್ನು ರದ್ದುಪಡಿಸಲಾಗಿತ್ತು. ಮಾತ್ರವಲ್ಲದೆ ಬ್ಯಾಂಕಿನವರು ಸಾಲವನ್ನು ಮರುವಸೂಲಿ ಮಾಡಿದ್ದರು. ಪ್ರಸ್ತುತ ಅವರು ಈ ಮನೆ ಅಡಿಸ್ಥಳದ ಬಗ್ಗೆ ಕಂದಾಯ ಇಲಾಖೆಗೆ ಸುಳ್ಳು ಮಾಹಿತಿ ನೀಡಿ 94ಸಿ ಅಡಿಯಲ್ಲಿ ಮನೆ ಅಡಿ ಸ್ಥಳವನ್ನು ಮುಂಜೂರು ಮಾಡಿಸಿಕೊಂಡಿರುವುದು ನನ್ನ ಗಮನಕ್ಕೆ ಬಂದಿದ್ದು, ಈ ಬಗ್ಗೆ ನಾನು ಮಂಜೂರಾತಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ನೀಡುವಂತೆ ಮಾಹಿತಿ ಹಕ್ಕಿನಡಿ ಕಡಬ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಿದ್ದೇನೆ. ಈ ಹಿನ್ನಲೆಯಲ್ಲಿ ಪಂಚಾಯತ್ ಅಧ್ಯಕ್ಷರು ನನ್ನ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ನಿರಾಪೇಕ್ಷಣಾ ಪತ್ರ ನೀಡಲು ಆಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈಗಾಗಲೇ ಗ್ರಾಮ ಪಂಚಾಯತ್ ಹಾಲಿ ಉಪಾಧ್ಯಕ್ಷೆ ಕಮಲಾಕ್ಷಿ ಬೆದ್ರಂಗಳ ಅವರು ಅಕ್ರಮವಾಗಿ ನಿರ್ಮಿಸಿರುವ ಕುರಿತು ಲೋಕಾಯುಕ್ತ ಪ್ರಕರಣ ದಾಖಲಾಗಿದೆ. ಪಂಚಾಯಿತಿ ಸದಸ್ಯ ಗಣೇಶ್ ಉದಿನಡ್ಕ ಎಂಬವರು ಬೆದರಿಕೆಯೊಡ್ಡಿರುವ ಕುರಿತು ಬೆಳ್ಳಾರೆ ಪೊಲೀಸರಿಗೆ ದೂರು ನೀಡಲಾಗಿದೆ. ಕಾಣಿಯೂರು ಗ್ರಾಮ ಪಂಚಾಯತ್‍ನಲ್ಲಿ ನಡೆಯುತ್ತಿರುವ ಅವ್ಯವಹಾರಗಳ ವಿರುದ್ದ ರುಕ್ಮಯ್ಯ ಗೌಡ ಅವರು ನಿರಂತರ ಹೋರಾಟ ನಡೆಸುತ್ತಿದ್ದು, ತಾನೂ ಈ ಹೋರಾಟದಲ್ಲಿ ಭಾಗಿಯಾಗಿದ್ದೇನೆ ಎಂದು ಗ್ರಾಮ ಪಂಚಾಯಿತಿ ಆಡಳಿತದವರು ತನ್ನ ತೇಜೋವಧೆಗೆ ಯತ್ನಿಸುತ್ತಿದ್ದಾರೆ ಎಂದು ಅವರು ದೂರಿದ್ದಾರೆ.
ತಾನು ಕ್ಷಮೆ ಕೇಳಿದರೆ ನಿರಾಪೇಕ್ಷಣಾ ಪತ್ರ ನೀಡುವುದಾಗಿ ಪಂಚಾಯತ್ ಆಡಳಿತದವರು ಹೇಳುತ್ತಿದ್ದಾರೆ. ಆದರೆ ನನ್ನ ಎಲ್ಲಾ ದಾಖಲೆಗಳು ಸರಿಯಾಗಿವೇ ಇವೆ. ನಾನು ತಪ್ಪು ಮಾಡಿಲ್ಲ. ಹಾಗಾಗಿ ನಾನು ಕ್ಷಮೆ ಕೇಳಲು ಸಿದ್ಧನಿಲ್ಲ ಎಂದ ತೇಜಪ್ರಸಾದ್ ಅವರು ಕಾನೂನು ಪ್ರಕಾರವೇ ಪಂಚಾಯತ್ ದಾಖಲಾತಿಗಳನ್ನು ಪರಿಶೀಲಿಸಿ ನನ್ನ ಮನೆಯ ವಿದ್ಯುತ್ ಸಂಪರ್ಕಕ್ಕಾಗಿ ನಿರಾಪೇಕ್ಷಣಾ ಪತ್ರ ನೀಡಬೇಕು. ಇಲ್ಲದಿದ್ದಲ್ಲಿ ಕಾನೂನು ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ.