ಭಾರತದ್ದು ವಿವಿಧತೆ ಹೊಂದಿರುವ ಶ್ರೇಷ್ಠ ಸಂವಿಧಾನ : ನ್ಯಾ. ಅಶೋಕ್ ಹಿಂಚ್‍ಗಿರಿ

ಪುತ್ತೂರು : ಭಾರತದ ಸಂವಿಧಾನವು ಅತೀ ಹೆಚ್ಚಿನ ವಿವಿಧತೆಯನ್ನು ಹೊಂದಿರುವ ಜನರನ್ನು ನಿರ್ವಹಿಸುವ ಅತೀ ಶ್ರೇಷ್ಠ ಸಂವಿಧಾನವಾಗಿದೆ. ಈ ಹಿನ್ನಲೆಯಲ್ಲಿ ಸಂವಿಧಾನ ದಿನವನ್ನು ಆಚರಿಸುವುದು ಹೆಮ್ಮೆಯ ವಿಷಯ ಎಂದು ರಾಜ್ಯ ಹೈಕೋರ್ಟಿನ ನಿವೃತ್ತ ನ್ಯಾಯಾಧೀಶ ಅಶೋಕ್ ಹಿಂಚ್‍ಗಿರಿ ಅವರು ಹೇಳಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಸೋಮವಾರ ನಡೆದ ನೂತನ ಅಣಕು ನ್ಯಾಯಾಲಯ ಕಟ್ಟಡದ ಉದ್ಘಾಟನೆ, ಸಂವಿಧಾನ ದಿನಾಚರಣೆ ಮತ್ತು ಬೆನಗಲ್ ನರಸಿಂಗ ರಾವ್ ಅವರ ಭಾವಚಿತ್ರ ಅನಾವರಣ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಬೆನಗಲ್ ನರಸಿಂಗ್ ರಾವ್ ಅವರು ಸಂವಿಧಾನ ನಿರ್ಮಾಣ ಕಾರ್ಯದಲ್ಲಿ ತಮ್ಮ ಮಹತ್ವಪೂರ್ಣ ಸೇವೆಯನ್ನು ನೀಡಿದ್ದು, ಸಂವಿಧಾನಕ್ಕೆ ಅವರ ಕೊಡುಗೆಗಳು ಅಪಾರ ಎಂದು ಅವರು ಹೇಳಿದರು.
ಅಣಕು ನ್ಯಾಯಾಲಯ ಕಟ್ಟಡ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಅವರು ಮಾತನಾಡಿ, ವಿವಿಧತೆಯಲ್ಲಿ ಏಕತೆ ಎಂಬುದು ಭಾರತೀಯರಲ್ಲಿ ರಕ್ತಗತವಾಗಿದೆ. ಆದ್ದರಿಂದಲೇ ಭಾರತೀಯ ಸಂವಿಧಾನವು ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಬೆನಗಲ್ ನರಸಿಂಗ್ ರಾವ್ ಅವರಂತಹ ವ್ಯಕ್ತಿಗಳನ್ನು ನೆನಪಿಸಿಕೊಳ್ಳುವುದು ಒಳ್ಳೆಯ ವಿಚಾರ ಎಂದರು.
ಮುಖ್ಯ ಅತಿಥಿಯಾಗಿದ್ದ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾದ ನಿವೃತ್ತ ಕುಲಸಚಿವ ಪ್ರೊ. ವಿ. ಎಸ್. ಮಲ್ಲಾರ್ ಅವರು ಸಂವಿಧಾನ ದಿನದ ಮಹತ್ವ ಮತ್ತು ಪ್ರಸ್ತುತ ದಿನಗಳಲ್ಲಿ ನಡೆಯುತ್ತಿರುವ ಕಾನೂನು ವಿಚಾರಗಳ ಕುರಿತು ಮಾತನಾಡಿದರು.
ಕಾನೂನು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಗಣೇಶ್ ಜೋಷಿ ಬಿ., ಮತ್ತು ಸಂಚಾಲಕ ವಿಜಯನಾರಾಯಣ ಕೆ.ಎಂ ಉಪಸ್ಥಿತರಿದ್ದರು. ಕಾನೂನು ಅಧ್ಯಯನ ವಿಭಾಗದ ನಿರ್ದೇಶಕ ಡಾ. ಬಿ. ಕೆ. ರವಿಂದ್ರ ಸ್ವಾಗತಿಸಿದರು. ಪ್ರಾಂಶುಪಾಲ ರಾಜೆಂದ್ರ ಪ್ರಸಾದ್.ಎ ವಂದಿಸಿದರು.