ತಲಪಾಡಿ: ಮರಳು ಅಕ್ರಮ ಸಾಗಾಟ; ಆರು ಲಾರಿಗಳು ಪೊಲೀಸ್ ವಶಕ್ಕೆ

ಮಂಗಳೂರು, ನ.27: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಪತ್ತೆ ಹಚ್ಚಿರುವ ಕೊಣಾಜೆ ಠಾಣಾ ಪೊಲೀಸರು ಮರಳು ಸಹಿತ ಆರು ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ.
ನ.25 ಮತ್ತು 26ರಂದು ಎರಡು ದಿನಗಳಲ್ಲಿ ಮುಂಜಾನೆ 3:30ರ ಸುಮಾರಿಗೆ ಈ ಕಾರ್ಯಾಚರಣೆ ನಡೆಸಲಾಗಿದೆ. ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತಲಪಾಡಿ ಟೋಲ್‌ಗೇಟ್ ಬಳಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಆರು ಲಾರಿಗಳನ್ನು ಕೊಣಾಜೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಪೈಕಿ ನಾಲ್ಕು ಮರಳು ತುಂಬಿದ್ದ 12 ಚಕ್ರಗಳ ಲಾರಿಗಳಾಗಿದ್ದರೆ, ಒಂದು ಮರಳು ತುಂಬಿದ್ದ ಟಿಪ್ಪರ್ ಹಾಗೂ ಮರಳು ಖಾಲಿ ಮಾಡಿ ಬಂದಿದ್ದ ಟಿಪ್ಪರ್ ಸೇರಿದೆ.
ವಶಪಡಿಸಿಕೊಂಡ ಸೊತ್ತುಗಳ ಒಟ್ಟು ವೌಲ್ಯ 1.25 ಕೋ.ರೂ. ಎಂದು ಅಂದಾಜಿಸಲಾಗಿದೆ. ಇವುಗಳನ್ನು ಮುಂದಿನ ಕ್ರಮಕ್ಕಾಗಿ ಉಳ್ಳಾಲ ಠಾಣೆಗೆ ಹಸ್ತಾಂತರಿಸಲಾಗಿದೆ.
ಈ ಕಾರ್ಯಾಚರಣೆಯು ಮಂಗಳೂರು ದಕ್ಷಿಣ ಉಪ ವಿಭಾಗದ ಎ.ಸಿ.ರಾಮ ರಾವ್ ಮಾರ್ಗದರ್ಶನದಲ್ಲಿ ಕೊಣಾಜೆ ಠಾಣಾ ಪೊಲೀಸ್ ನಿರೀಕ್ಷಕ ರವಿ ನಾಯ್ಕಿ, ಸಿಬ್ಬಂದಿ ಅಶೋಕ್ ಕುಮಾರ್, ಚಾಲಕ ಜ್ಞಾನಪ್ರಕಾಶ್ ಕೈಗೊಂಡಿದ್ದಾರೆ ಎಂದು ಪೊಲೀಸ್ ಪ್ರಕಟನೆ ತಿಳಿಸಿದೆ.