ಹೆಜಮಾಡಿ ಟೋಲ್ ಗೇಟ್ ವಿರುದ್ಧ ಮುಂದುವರಿದ ಜನಾಕ್ರೋಶ; ಪ್ರತಿಭಟನೆ

ಪಡುಬಿದ್ರೆ, ನ.27: ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿಯಲ್ಲಿರುವ ಟೋಲ್‌ಗೇಟ್‌ನಲ್ಲಿ ಸ್ಥಳೀಯ ವಾಹನಗಳಿಂದ ಟೋಲ್ ಸಂಗ್ರಹಿಸುತ್ತಿರುವುದರ ವಿರುದ್ಧ ಜನಾಕ್ರೋಶ ಮುಂದುವರಿದಿದ್ದು, ಇಂದು ಬೆಳಗ್ಗೆಯಿಂದ ಮತ್ತೆ ಪ್ರತಿಭಟನೆ ಆರಂಭಗೊಂಡಿದೆ.
ಇಂದು ಬೆಳಗ್ಗೆಯಿಂದ ಟೋಲ್ ವಿರೋಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಟೋಲ್‌ಗೇಟ್ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ರಾಷ್ಟ್ರೀಯ ಹೆದ್ದಾರಿ 66 ಚತುಷ್ಪಥ ಕಾಮಗಾರಿ ಸಂಪೂರ್ಣಗೊಳ್ಳದೆ ಸ್ಥಳೀಯ ವಾಹನಗಳಿಗೆ ಟೋಲ್ ಸಂಗ್ರಹಕ್ಕೆ ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ. 'ಟೋಲ್‌ಗೇಟ್ ತೊಲಗಲಿ', 'ನ್ಯಾಯ ಬೇಕು' ಎಂದು ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುತ್ತಿದ್ದಾರೆ.
ಪ್ರತಿಭಟನೆಯ ಹಿನ್ನೆಲೆಯಲ್ಲಿ ಟೋಲ್‌ಗೇಟ್‌ಗೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಪ್ರತಿಭಟನೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ದೇವಿಪ್ರಸಾದ್ ಶೆಟ್ಟಿ, ಗುಲಾಂ ಮುಹಮ್ಮದ್, ಶೇಖರ ಹೆಜಮಾಡಿ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ನವೀನ್ ಚಂದ್ರ ಜೆ. ಶೆಟ್ಟಿ, ಕೌಸರ್ ಪಡುಬಿದ್ರೆ, ಅನ್ಸಾರ್ ಉಡುಪಿ, ತಾಪಂ ಸದಸ್ಯರಾದ ರೇಣುಕಾ, ನೀತಾ ಗುರುರಾಜ್, ಯು.ಸಿ.ಶೇಕಬ್ಬ, ಮಿಥುನ್ ಹೆಗ್ಡೆ, ದಿವಾಕರ್ ಶೆಟ್ಟಿ ಕಾಪು, ದೇವ್ ಮುಲ್ಕಿ, ಕಾರು ಚಾಲಕ ಮಾಲಕರ ಸಂಘದ ರವಿ ಶೆಟ್ಟಿ ಪಡುಬಿದ್ರೆ, ವಿಶ್ವಾಸ್ ಅಮೀನ್, ಶಶಿಕಾಂತ್ ಪಡುಬಿದ್ರೆ, ಮಜೀದ್ ಪೊಲ್ಯ, ಶಶಿಕಾಂತ್ ಶೆಟ್ಟಿ ಮುಲ್ಕಿ, ಝಹೀರ್ ಬೆಳಪು, ಶಿಲ್ಪಾ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.