ಮಂಗಳೂರು: ರಾಜ್ಯ ಮಟ್ಟದ ಸ್ಪೆಶಲ್ ಒಲಿಂಪಿಕ್ಸ್‌ಗೆ ಚಾಲನೆ

ಮಂಗಳೂರು, ನ.26: ನಗರದ ಮಂಗಳಾ ಕ್ರೀಡಾಂಗಣದಲ್ಲಿಂದು ರಾಜ್ಯಮಟ್ಟದ ‘ಸ್ಪೆಶಲ್ ಒಲಿಂಪಿಕ್ಸ್ ಭಾರತ ಕರ್ನಾಟಕ-2018-19’ನ್ನು ಲಯನ್ಸ್ ಜಿಲ್ಲೆ 317ಡಿಯ ಗವರ್ನರ್ ಕೆ.ದೇವದಾಸ ಭಂಡಾರಿ ಉದ್ಘಾಟಿಸಿ ಶುಭ ಹಾರೈಸಿದರು.
ರಾಜ್ಯ ಮಟ್ಟದ ಸ್ಪೆಷಲ್ ಒಲಿಂಪಿಕ್ಸ್ ಭಾರತ್ ಕರ್ನಾಟಕದ ಸಹಯೋಗದೊಂದಿಗೆ ಲಯನ್ಸ್ 317ಡಿ ಜಿಲ್ಲೆ ವತಿಯಿಂದ ಭಿನ್ನ ಸಾಮರ್ಥ್ಯದ ಮಕ್ಕಳಿಗಾಗಿ ಉತ್ತಮ ದೈಹಿಕ ಸಾಮರ್ಥ್ಯದ ಮತ್ತು ಕಡಿಮೆ ದೈಹಿಕ ಸಾಮರ್ಥ್ಯದ ಮಕ್ಕಳ ವಿಭಾಗದಲ್ಲಿ ಸ್ಪರ್ಧೆಗಳು ಹಮ್ಮಿಕೊಳ್ಳಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳ ವಿಶೇಷ ಶಾಲೆಗಳ 450 ಕ್ರೀಡಾಪಟುಗಳು, 100 ಕ್ರೀಡಾ ತರಬೇತುದಾರರು ಸೇರಿದಂತೆ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿವೆ. ವಿಶೇಷ ಮಕ್ಕಳಿಗೆ ಅನುಕಂಪದ ಬದಲು ಅವರಿಗೆ ಅವಕಾಶ ಕಲ್ಪಿಸುವ ಮೂಲಕ ಅವರನ್ನು ಪ್ರೋತ್ಸಾಹಿಸಲು ಈ ವಿಶೇಷ ಒಲಿಂಪಿಕ್ಸನ್ನು ಆರಂಭಿಸಲಾಗಿದೆ ಎಂದು ದೇವದಾಸ ಭಂಡಾರಿ ತಿಳಿಸಿದ್ದಾರೆ.
ಅಬುಧಾಬಿಯಲ್ಲಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಒಲಿಂಪಿಕ್ಸ್ ವಿಶೇಷ ಒಲಿಂಪಿಕ್ಸ್‌ನ ಕ್ಷೇತ್ರದ ನಿರ್ದೇಶಕಿ ಕುಮುದಾ ಮಾತನಾಡಿ, ಮುಂದಿನ ಮಾರ್ಚ್12ರಿಂದ 22ರವರೆಗೆ ಅಬುಧಾಬಿಯಲ್ಲಿ 50ನೇ ವರ್ಷದ ಅಂತರ್‌ರಾಷ್ಟ್ರೀಯ ಮಟ್ಟದ ವಿಶೇಷ ಒಲಿಂಪಿಕ್ಸ್ ಕ್ರೀಡಾಕೂಟ ವಿಶೇಷ ಮಕ್ಕಳಿಗಾಗಿ ನಡೆಯಲಿದೆ. ಈ ಕ್ರೀಡಾಕೂಟದಲ್ಲಿ 250 ದೇಶಗಳ 20 ದಶಲಕ್ಷ ಮಕ್ಕಳು ಭಾಗವಹಿಸುತ್ತಾರೆ ಎಂದು ತಿಳಿಸಿದರು.
1968ರಲ್ಲಿ ಆರಂಭಗೊಂಡ ಈ ವಿಶೇಷ ಮಕ್ಕಳ ಒಲಿಂಪಿಕ್ಸ್ 50ನೇ ವರ್ಷಾಚರಣೆಯ ಸಂಭ್ರಮದಲ್ಲಿದೆ. ಈ ಮಕ್ಕಳು ಇತರ ಮಕ್ಕಳಂತೆ ತಮ್ಮ ವಿಶೇಷ ಸಾಮರ್ಥ್ಯವನ್ನು ಪ್ರದರ್ಶಿಸಲು ಮತ್ತು ಅವರನ್ನು ಪೋತ್ಸಾಹಿಸುವ ದೃಷ್ಟಿಯಿಂದ ನಡೆಯುತ್ತದೆ ಎಂದು ಹೇಳಿದರು.
ಪ್ರಥಮ ಬಾರಿಗೆ ಮಧ್ಯಪ್ರಾಚ್ಯದ ಅಬುಧಾಬಿಯಲ್ಲಿ ನಡೆಯಲಿರುವ ಅಂತರ್‌ರಾಷ್ಟ್ರೀಯ ಒಲಿಂಪಿಕ್ಸ್‌ಗೆ ಈಗಾಗಲೆ ತಯಾರಿ ನಡೆಯುತ್ತಿದೆ. 20ವಿಶೇಷ ಮಕ್ಕಳ ಕ್ರೀಡಾ ಪಟುಗಳು ಹಾಗೂ 5 ತರಬೇತುದಾರರು ಕರ್ನಾಟಕದಿಂದ ಆಯ್ಕೆಯಾಗಿದ್ದಾರೆ. ಈಗಾಗಲೇ ಎರಡು ಸುತ್ತಿನ ಸಿದ್ಧತಾ ಪಂದ್ಯಗಳು ನಡೆದಿವೆ ಎಂದು ಕುಮುದಾ ವಿವರಿಸಿದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಲಯನ್ಸ್ ವಿಶ್ವನಾಥ ಶೆಟ್ಟಿ ವಹಿಸಿದ್ದರು.ವಿಶೇಷ ಮಕ್ಕಳ ವಿಭಾಗದ ಲಯನ್ಸ್ ಜಿಲ್ಲಾ ಸಂಯೋಜಕ ಮುಹಮ್ಮದ್ ಅಲಿ, ಸಂಯೋಜಕಿ ಮೈಮುನಾ ಮುಹಿಯುದ್ದೀನ್, ಲಯನ್ಸ್ ಸಂಪುಟದ ಮಧ್ವರಾಜ್ ಕಲ್ಮಾಡಿ, ಶಾಂಭವಿ, ಗುಣವತಿ ರಮೇಶ್, ಕಸ್ತೂರಿ ಹೆಗ್ಡೆ, ಕೃಷ್ಣ ಕುಮಾರಿ ಎಸ್. ಆಳ್ವಾ, ಭಾರತಿ ಬಿ.ಎಂ., ಇಂದಿರಾ ಶೆಟ್ಟಿ, ಪಲ್ಲವಿ ಪೈ ಮೊದಲಾದವರು ಉಪಸ್ಥಿತರಿದ್ದರು.
ವಿಶೇಷ ಮಕ್ಕಳ ಕ್ರೀಡಾ ಕೂಟ ಧ್ವಜಾರೋಹಣದ ಮೂಲಕ ಆರಂಭಗೊಂಡಿತು. ಇದೇ ಸಂದರ್ಭದಲ್ಲಿ ವಿಶೇಷ ಮಕ್ಕಳ ಪಥ ಸಂಚಲನ ಕಾರ್ಯಕ್ರಮ ನಡೆಯಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ 20 ತಂಡಗಳು ಪಥ ಸಂಚಲನದಲ್ಲಿ ಭಾಗವಹಿಸಿದ್ದವು.