ರಾ.ಹೆ.75ರ ಅಡ್ಡಹೊಳೆ-ಬಿ.ಸಿ.ರೋಡ್ ಚತುಷ್ಪಥ ಕಾಮಗಾರಿ ಪುನಃ ಆರಂಭಿಸಲು ರಮಾನಾಥ ರೈ ಆಗ್ರಹ
ಮಂಗಳೂರು, ನ.27: ಸ್ಥಗಿತಗೊಂಡಿರುವ ಮಂಗಳೂರು-ಬೆಂಗಳೂರು ಸಂಪರ್ಕಿಸುವ ಅಡ್ಡಹೊಳೆ ಮತ್ತು ಬಿ.ಸಿ.ರೋಡು ನಡುವಿನ ರಾ.ಹೆ. 75 ಚತುಷ್ಪಥ ಕಾಮಗಾರಿಯನ್ನು ಪುನಃ ಆರಂಭಿಸದಿದ್ದರೆ ಅಡ್ಡಹೊಳೆಯಿಂದ ಮಂಗಳೂರಿಗೆ ಪಾದಯಾತ್ರೆ ಕೈಗೊಂಡು ಕೇಂದ್ರ ಸರಕಾರವನ್ನು ಎಚ್ಚರಿಸುವ ಪ್ರಯತ್ನ ನಡೆಸಲಾಗುವುದು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.
ನಗರದ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಡುಬಿದಿರೆ ಹೆದ್ದಾರಿ, ಪಂಪ್‌ವೆಲ್ ಮೇಲ್ಸೇತುವೆ ಸಹಿತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಆಧೀನದಲ್ಲಿರುವ ಎಲ್ಲ ಪ್ರಮುಖ ರಸ್ತೆ ಹಾಗೂ ಮೇಲ್ಸೇತುವೆಗಳ ಕಾಮಗಾರಿ ನನೆಗುದಿಗೆ ಬಿದ್ದಿದೆ ಎಂದು ಆರೋಪಿಸಿದರು.
ಯುಪಿಎ ಸರಕಾರದ ಅವಧಿಯಲ್ಲಿ ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಯೋಜನೆ ಮಂಜೂರುಗೊಂಡಿತ್ತು. ದೇಶದ ಪ್ರಮುಖ ಎಲ್‌ಆ್ಯಂಡ್‌ಟಿ ಸಂಸ್ಥೆಗೆ ಕಾಮಗಾರಿಯ ಗುತ್ತಿಗೆ ವಹಿಸಿಕೊಡಲಾಗಿತ್ತು. ಅರಣ್ಯ ಸಂರಕ್ಷಣಾ (ಎಫ್‌ಸಿ) ಕಾಯ್ದೆ ಪ್ರಕಾರ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. 36 ಹೆಕ್ಟೇರ್ ಭೂಪರಿವರ್ತನೆ ನಡೆದಿದೆ. ಯೋಜನೆ ಅನುಷ್ಠಾನಗೊಳಿಸಲು ಪೂರಕ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡಿದ್ದರೂ ಕೂಡಾ ಕೇಂದ್ರ ಸರಕಾರ, ಎಲ್‌ಆ್ಯಂಡ್‌ಟಿ ಕಂಪೆನಿ ಮತ್ತು ಎನ್‌ಎಚ್‌ಎಐ ಕಂಪನಿ ನಡುವಿನ ಗೊಂದಲಗಳಿಂದ ಕಾಮಗಾರಿ ಅರ್ಧದಲ್ಲಿ ನಿಂತಿದೆ. ಗುತ್ತಿಗೆದಾರರಿಗೆ ಸರಿಯಾಗಿ ಹಣ ಸಂದಾಯ ವಾಗುತ್ತಿಲ್ಲ. ಇದರಿಂದ ಗುತ್ತಿಗೆದಾರರಿಗೆ ನಷ್ಟವಾಗಿದ್ದು, ಮರು ಟೆಂಡರ್ ಕರೆಯಬೇಕಾಗಿದೆ ಎನ್ನುವ ಮಾಹಿತಿ ಇದೆ. ಈ ಬಗ್ಗೆ ಸಂಸದರು ವಾಸ್ತವಾಂಶ ಬಹಿರಂಗಪಡಿಸಬೇಕಿದೆ ಎಂದು ಮಾಜಿ ಸಚಿವ ರಮಾನಾಥ ರೈ ನುಡಿದರು.
ಎನ್‌ಎಚ್‌ಎಐ ಕೇಂದ್ರ ಸರಕಾರದ ಆಧೀನದಲ್ಲಿದ್ದು, ಈ ಸಮಸ್ಯೆ ಬಗೆಹರಿಸುವ ಜವಾಬ್ದಾರಿಯು ಕೇಂದ್ರ ಸರಕಾರದ್ದಾಗಿದೆ. ಎನ್‌ಎಚ್‌ಎಐ ಕಾಮಗಾರಿಗಳು ವಿಳಂಬ ಹಾಗೂ ಸ್ಥಗಿತವಾಗಿರುವುದಕ್ಕೆ ರಾಜ್ಯ ಸರಕಾರವೇ ಹೊಣೆ ಎಂದು ಸ್ಥಳೀಯ ಸಂಸದರು ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ಸಂಸದರು ಜವಾಬ್ದಾರಿ ಯಿಂದ ಜಾರಿಕೊಳ್ಳಲು ಯತ್ನಿಸುವುದನ್ನು ಬಿಟ್ಟು ಕಾಮಗಾರಿ ತ್ವರಿತವಾಗಿ ಮುಗಿಸಲು ಇರುವ ಅಡ್ಡಿ ಆತಂಕಗಳನ್ನು ಮೊದಲು ನಿವಾರಿಸಲಿ ಎಂದು ರಮಾನಾಥ ರೈ ಸಲಹೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಪಕ್ಷದ ಮುಖಂಡರಾದ ಇಬ್ರಾಹೀಂ ಕೋಡಿಜಾಲ್, ಸದಾಶಿವ ಉಳ್ಳಾಲ್, ಮಿಥುನ್ ರೈ, ಮಮತಾ ಗಟ್ಟಿ, ನವೀನ್ ಡಿಸೋಜ, ಶಶಿಧರ ಹೆಗ್ಡೆ, ಎಸ್.ಅಪ್ಪಿ, ನಿತ್ಯಾನಂದ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.