ತೋಟ ಬೆಂಗ್ರೆ ಸಾಮೂಹಿಕ ಅತ್ಯಾಚಾರ ಪ್ರಕರಣ: ಆರು ಮಂದಿ ಆರೋಪಿಗಳ ಸೆರೆ
ಬಂಧನಕ್ಕೊಳಗಾದವರಲ್ಲಿ ಮೂವರು ಅಪ್ರಾಪ್ತರು !

ಮಂಗಳೂರು, ನ.27: ನಗರದ ಹೊರವಲಯ ತೋಟ ಬೆಂಗ್ರೆಯಲ್ಲಿ ಇತ್ತೀಚೆಗೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಮೂವರು ಅಪ್ರಾಪ್ತರಾಗಿದ್ದಾರೆ.
ತೋಟಬೆಂಗ್ರೆ ನಿವಾಸಿಗಳಾದ ಪ್ರಜ್ವಲ್ (25), ಆದಿತ್ಯ (22), ಅರುಣ್ (25) ಬಂಧಿತರು. ಇನ್ನುಳಿದ ಮೂವರು ಅಪ್ರಾಪ್ತರಾಗಿದ್ದು, ಮತ್ತೋರ್ವನ ಬಂಧನಕ್ಕೆ ಬಲೆ ಬೀಸಲಾಗಿದೆ.
ಪ್ರಕರಣದ ವಿವರ
ತೋಟ ಬೆಂಗ್ರೆಯಲ್ಲಿ ನ.18ರಂದು ಯುವಕ-ಯುವತಿಯರಿಬ್ಬರು ವಿಹಾರಕ್ಕೆ ತೆರಳಿದ್ದು, ಯುವತಿಯನ್ನು ಅಪಹರಿಸಿದ ಏಳು ಮಂದಿ ದುಷ್ಕರ್ಮಿಗಳ ತಂಡವೊಂದು ಸಾಮೂಹಿಕ ಅತ್ಯಾಚಾರ ಎಸಗಿತ್ತು.
ದ.ಕ. ಜಿಲ್ಲೆಯ ಹಳ್ಳಿ ಪ್ರದೇಶವೊಂದರ ಯುವತಿ ಕಾರ್ಖಾನೆಯೊಂದರಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದಳು. ಹೊರರಾಜ್ಯದ ಯುವಕನೊಂದಿಗೆ ಸ್ನೇಹವಿತ್ತು. ಆತನೊಂದಿಗೆ ನ.18ರ ಮಧ್ಯಾಹ್ನ 12 ಗಂಟೆ ಸುಮಾರಿಗೆ ತೋಟ ಬೆಂಗ್ರೆಗೆ ಬಂದಿದ್ದಳು. ಇಬ್ಬರೂ ಜೊತೆಗೂಡಿ ದ್ವೀಪದ ಒಳಪ್ರದೇಶಕ್ಕೆ ತೆರಳಿದ್ದರು.
ಯುವಕ ಮತ್ತು ಯುವತಿ ಒಟ್ಟಾಗಿ ಇರುವುದನ್ನು ಗಮನಿಸಿದ ಸ್ಥಳೀಯ ಯುವಕರು, ಇಬ್ಬರನ್ನೂ ಬೆದರಿಸಿದ್ದಾರೆ. ಯುವಕನ ಮೇಲೆ ಹಲ್ಲೆ ನಡೆಸಿ, ಯುವತಿಯನ್ನು ಎಳೆದೊಯ್ದು ದೌರ್ಜನ್ಯ ನಡೆಸಿದ್ದಾರೆ. ಯುವತಿ ಈ ಕುರಿತು ಯಾವುದೇ ದೂರು ನೀಡಿರಲಿಲ್ಲ. ಸೋಮವಾರ ಬಿ.ಸಿ.ರೋಡಿನ ಆಸ್ಪತ್ರೆ ಯೊಂದಕ್ಕೆ ಚಿಕಿತ್ಸೆಗೆಂದು ಬಂದ ಸಂದರ್ಭ ಸಂಶಯಗೊಂಡ ವೈದ್ಯರು ವಿಚಾರಿಸಿದಾಗ ಯುವತಿ ನಡೆದ ಘಟನೆಯನ್ನು ವಿವರಿಸಿದ್ದರು.
ಮಾಹಿತಿಯನ್ನು ಆಧರಿಸಿ ಸಂತ್ರಸ್ತ ಯುವತಿಯನ್ನು ಪತ್ತೆ ಮಾಡಿರುವ ನಗರ ಪೊಲೀಸರು, ಆಕೆಯ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಂಗಳೂರು ನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಕುರಿತು ಜಿಲ್ಲಾ ಪೊಲೀಸ್ ವ್ಯಾಪ್ತಿಯ ಬಂಟ್ವಾಳ ಠಾಣೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಆದರೆ ಅಲ್ಲಿ ದೂರು ದಾಖಲಿಸಿಕೊಂಡಿರಲಿಲ್ಲ ಎಂದು ಸಂತ್ರಸ್ತೆ ನಗರ ಪೊಲೀಸರಿಗೆ ತಿಳಿಸಿದ್ದಾಳೆ. ಈ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಅತ್ಯಾಚಾರ ಆರೋಪಿಗಳ ವಿರುದ್ಧ ಸೂಕ್ರ ಕ್ರಮ: ಪೊಲೀಸ್ ಆಯುಕ್ತ
ಅತ್ಯಾಚಾರ ಪ್ರಕರಣವು ನ. 26ರಂದು ಮಂಗಳೂರು ನಗರ ಪೊಲೀಸ್ ಗಮನಕ್ಕೆ ಬಂದಿದೆ. ಆರೋಪಿಗಳ ಗಾಂಜಾ ಸೇವನೆ ಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ. ಎಲ್ಲ ಆರೋಪಿಗಳನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ತಿಳಿಸಿದ್ದಾರೆ.