ಮಂಗಳೂರು: ಕೆಲಸ ನಿರಾಕರಿಸಿದ ಸಂಸ್ಥೆಯ ವಿರುದ್ಧ ಕಾನೂನು ಕ್ರಮಕ್ಕೆ ಸಿಐಟಿಯು ಆಗ್ರಹ
ಮಂಗಳೂರು, ನ.27: ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದ ಕಾರ್ಮಿಕರನ್ನು ವಿನಾಃ ಕಾರಣ ಕೆಲಸದಿಂದ ವಜಾ ಸಾಯಿ ಸೆಕ್ಯುರಿಟಿ ಸಂಸ್ಥೆಯ ವಿರುದ್ಧ ಮತ್ತು ಸಂಸ್ಥೆಯೊಂದಿಗೆ ಕೈ ಜೋಡಿಸಿರುವ ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕಿ ಡಾ.ರಾಜೇಶ್ವರಿ ದೇವಿಯವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಸಿಐಟಿಯು ದ.ಕ.ಜಿಲ್ಲಾ ಸಮಿತಿಯು ಆಗ್ರಹಿಸಿದೆ.
ಕಳೆದ ಒಂದೂವರೆ ವರ್ಷದಿಂದ ಗುತ್ತಿಗೆ ಕಾರ್ಮಿಕರು ವೆನ್ಲಾಕ್ ಆಸ್ಪತ್ರೆಯಲ್ಲಿ ಪೇಟೆಂಟ್ ಕ್ಯಾರ್ ಸಿಬ್ಬಂದಿಗಳಾಗಿ ದುಡಿಯುತ್ತಿದ್ದರು. ಈಮಧ್ಯೆ ಅಕ್ಟೋಬರ್ 12ರಂದು ಬೆಳಗ್ಗೆ 10 ಗಂಟೆಗೆ ಸಂದರ್ಶನದ ನೆಪದಲ್ಲಿ ಕರೆಯಿಸಿಕೊಂಡ ಸಾಯಿ ಸೆಕ್ಯುರಿಟಿ ಸಂಸ್ಥೆಯ ಮುಖ್ಯಸ್ಥರು ಸಂಜೆ 4 ಗಂಟೆಯಾದರೂ ಆಸ್ಪತ್ರೆಗೆ ಬಾರದ ಕಾರಣ ರಾತ್ರಿ ಪಾಳಿಯವರು ಮನೆಗೆ ಹೋಗದೆ, ಊಟ ತಿಂಡಿ ಇಲ್ಲದೆ ಕಾಯುವಂತಾಗಿತ್ತು. ಇದರಿಂದ ಅಸಮಾಧಾನಗೊಂಡ 10 ಕಾರ್ಮಿಕರು ಈ ಅನ್ಯಾಯವನ್ನು ಪ್ರಶ್ನಿಸಿದ್ದನ್ನೇ ನೆಪಮಾಡಿಕೊಂಡ ಸಂಸ್ಥೆಯು ಕೆಲಸದಿಂದ ವಜಾ ಮಾಡಿದೆ. ಈ ಮಧ್ಯೆ ಸಿಐಟಿಯು ಹೋರಾಟ ಫಲವಾಗಿ ಕಾರ್ಮಿಕ ಇಲಾಖೆಯು ಮಧ್ಯಪ್ರವೇಶಿಸಿ ಕಾರ್ಮಿಕರು ಕೆಲಸ ಮುಂದುವರಿಸಲು ಸೂಚಿಸಿತಲ್ಲದೆ, ಡಿ. 3ರಂದು ಸಭೆ ನಡೆಸುವುದಾಗಿ ತಿಳಿಸಿತ್ತು. ಆದರೆ, ಆಸ್ಪತ್ರೆಯ ಅಧೀಕ್ಷಕಿ ಮತ್ತು ಸಾಯಿ ಸೆಕ್ಯುರಿಟಿ ಸಂಸ್ಥೆಯ ಮಾಲಕರು ಕಾರ್ಮಿಕ ಇಲಾಖೆಗೆ ವಿರುದ್ಧವಾಗಿ ಅಂದರೆ 67 ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡಿದ್ದಾರೆ. ಅಲ್ಲದೆ ಕಾರ್ಮಿಕರ ಪರ ಹೋರಾಡುತ್ತಿದ್ದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿದೆ. ಹಾಗಾಗಿ ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಮತ್ತು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮಧ್ಯೆ ಪ್ರವೇಶಿಸಬೇಕು ಎಂದು ಒತ್ತಾಯಿಸಿದೆ.